ಬೆಂಗಳೂರು: ಅಗತ್ಯ ಮತ್ತು ಸಕಾರಣವಿಲ್ಲದೆ ಮಗುವಿನ ಪಿತೃತ್ವ ನಿರ್ಧರಿಸಲು ಡಿಎನ್ಎ ಪರೀಕ್ಷೆಗೆ ಒತ್ತಾಯಿಸುವುದು ವಿವಾಹದ ಪಾವಿತ್ರ್ಯತೆಗೆ ಧಕ್ಕೆಯಾಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಆಸ್ತಿ ಪಾಲುದಾರಿಕೆಯ ಪ್ರಕರಣವೊಂದರಲ್ಲಿ ಶಿವಮೊಗ್ಗದ 39 ವರ್ಷದ ವ್ಯಕ್ತಿ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ತೀರ್ಪು ಪ್ರಕಟಿಸಿದ್ದು, ಮಗುವಿನ ತಂದೆ ತಾನೇ ಎಂಬುದು ಗೊತ್ತಿದ್ದರೂ ಕೆಲವೊಮ್ಮೆ ಪುರುಷ ನಿರಾಧಾರ ಆರೋಪ ಹೊರಿಸಿಬಿಡುತ್ತಾನೆ. ಮಹಿಳೆಯ ವ್ಯಕ್ತಿತ್ವವನ್ನು ನಾಶ ಮಾಡುತ್ತಾನೆ. ಈ ಹುಮ್ಮಸ್ಸಿನಲ್ಲಿ ಡಿಎನ್ಎ ಪರೀಕ್ಷೆಗೆ ಕೋರುತ್ತಾನೆ. ಆಗ ಮಹಿಳೆಯ ಘನತೆಗೆ ಪೆಟ್ಟು ಬಿದ್ದಂತಾಗುತ್ತದೆ ಎಂದು ಹೇಳಿದ್ದಾರೆ.
ಸಕಾರಣ ಮತ್ತು ಅಗತ್ಯವಿಲ್ಲದೆ ಡಿಎನ್ಎ ಪರೀಕ್ಷೆಗೆ ಒತ್ತಾಯಿಸುವುದು ವಿವಾಹದ ಪಾವಿತ್ರ್ಯ, ಸಾಂವಿಧಾನಿಕ ಚೌಕಟ್ಟುಗಳ ಅಡಿಯಲ್ಲಿ ದಂಪತಿಗೆ ಕೊಡ ಮಾಡಿದ ಗೌಪ್ಯತೆ ಮತ್ತು ಘನತೆಯ ಮೂಲಭೂತ ಹಕ್ಕು ಉಲ್ಲಂಘಿಸಿದಂತೆ ಎಂದು ನ್ಯಾಯಪೀಠ ತಿಳಿಸಿದೆ.
ರಿಟ್ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಪ್ರಕಟಿಸಿದೆ. ಡಿಎನ್ಎ ಪರೀಕ್ಷೆ ನಡೆಸುವಂತೆ ಕೋರಿ ಸಲ್ಲಿಸುವ ಅರ್ಜಿಗಳಿಗೆ ಉತ್ತರಿಸುವಾಗ ವಿಚಾರಣಾ ನ್ಯಾಯಾಲಯಗಳು ಈ ತೀರ್ಪಿನ ಸಮಯದಲ್ಲಿ ಮಾಡಲಾಗಿರುವ ಎಲ್ಲಾ ಅವಲೋಕನ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಮುಂದುವರೆಯಬೇಕು. ಈ ತೀರ್ಪನ್ನು ಸಂಬಂಧಿಸಿದ ನ್ಯಾಯಾಲಯಗಳಿಗೆ ರವಾನಿಸಬೇಕು ಎಂದು ಹೈಕೋರ್ಟ್ ರಿಜಿಸ್ಟ್ರಿಗೆ ನ್ಯಾಯಪೀಠ ಸೂಚಿಸಿದೆ.