ಬೆಂಗಳೂರು: ಈ ವರ್ಷ ನರ್ಸಿಂಗ್ ಕೋರ್ಸ್ ಶುಲ್ಕ ಹೆಚ್ಚಳ ಮಾಡುವುದಿಲ್ಲವೆಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಗುರುವಾರ ವಿಕಾಸಸೌಧದಲ್ಲಿ ನರ್ಸಿಂಗ್ ಕಾಲೇಜುಗಳ ಸಂಘದೊಂದಿಗೆ ಸಭೆ ನಡೆಸಿದ ಸಚಿವರು, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಮತ್ತು ಪೋಷಕರ ಮೇಲಿನ ಮೇಲಿನ ಹೊರೆ ತಪ್ಪಿಸುವ ಉದ್ದೇಶದಿಂದ ಈ ವರ್ಷ ನರ್ಸಿಂಗ್ ಕೋರ್ಸ್ ಶುಲ್ಕ ಹೆಚ್ಚಳ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಆರ್ಥಿಕವಾಗಿ ದುರ್ಬಲ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ಈ ಶೈಕ್ಷಣಿಕ ವರ್ಷ ಶುಲ್ಕ ಹೆಚ್ಚಳ ಮಾಡುವುದಿಲ್ಲ. ನರ್ಸಿಂಗ್ ವಿದ್ಯಾರ್ಥಿಗಳು ಹೆಚ್ಚಾಗಿ ಗ್ರಾಮೀಣ ಮತ್ತು ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯಿಂದ ಬಂದವರು. ಹೀಗಾಗಿ ಹೆಚ್ಚುವರಿ ಶುಲ್ಕ ವಿಧಿಸುವುದು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.
ಸರ್ಕಾರಿ ಕೋಟಾದಡಿ 10,000 ರೂ., ಇತರೆ ಕೋಟಾದಡಿ ಒಂದು ಲಕ್ಷ ರೂ., ಕರ್ನಾಟಕೇತರ ವಿದ್ಯಾರ್ಥಿಗಳಿಗೆ 1.4 ಲಕ್ಷ ರೂ. ಶುಲ್ಕ ರಚನೆ ಈ ವರ್ಷ ಕೂಡ ಮುಂದುವರೆಯಲಿದೆ. ಅನುಮೋದಿತ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕ ಪಡೆಯುವ ಕಾಲೇಜುಗಳ ಮಾನ್ಯತೆ ರದ್ದು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.