ದಕ್ಷಿಣ ಭಾರತದಲ್ಲಿ ಅಡುಗೆ ಅನಿಲ (ಎಲ್‌ಪಿಜಿ) ಸಾಗಣೆದಾರರು ಮುಷ್ಕರ ನಡೆಸುತ್ತಿದ್ದರೂ, ಗ್ರಾಹಕರಿಗೆ ಸಿಲಿಂಡರ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ ಎಂದು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ಭರವಸೆ ನೀಡಿವೆ.
ಕಂಪನಿಗಳ ಪ್ರಕಾರ, ದಕ್ಷಿಣ ಭಾಗದ ಎಲ್‌ಪಿಜಿ ಸಾರಿಗೆ ಮಾಲೀಕರ ಸಂಘದೊಂದಿಗೆ ಸಂಯೋಜಿತಗೊಂಡಿರುವ ಸಾಗಣೆದಾರರು ಮುಷ್ಕರ ನಡೆಸುತ್ತಿದ್ದಾರೆ. ಆದರೆ, ಕಂಪನಿಗಳಿಗೆ ಸೇರಿದ ಸ್ಥಾವರಗಳಲ್ಲಿ ಸಾಕಷ್ಟು ಎಲ್‌ಪಿಜಿ ದಾಸ್ತಾನು ಲಭ್ಯವಿದೆ. ವಿತರಕರು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದು, ಪೂರೈಕೆಗೆ ಯಾವುದೇ ತೊಂದರೆಯಾಗುವುದಿಲ್ಲ.
ಸರ್ಕಾರದ ಮಾರ್ಗಸೂಚಿಗಳ ಅನ್ವಯ ಪಾರದರ್ಶಕವಾಗಿ ಟೆಂಡರ್ ಕರಾರುಗಳನ್ನು ಸಿದ್ಧಪಡಿಸಲಾಗಿದೆ. ಸಾರ್ವಜನಿಕರ ಸುರಕ್ಷತೆಗಾಗಿ ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಹೊಸ ನಿಯಮಗಳು ಎಲ್‌ಪಿಜಿ ಸಾಗಣೆಯ ಸುರಕ್ಷತೆ ಮತ್ತು ದಕ್ಷತೆಯನ್ನು ಹೆಚ್ಚಿಸುತ್ತವೆ ಎಂದು ಕಂಪನಿಗಳು ತಿಳಿಸಿವೆ.
“ಸಾಗಣೆದಾರರ ಒಂದು ವಿಭಾಗ ಮಾತ್ರ ಮುಷ್ಕರಕ್ಕೆ ಕರೆ ನೀಡಿದೆ. ಅವರು ಪ್ರಾಥಮಿಕವಾಗಿ ಸುರಕ್ಷತಾ ಕ್ರಮಗಳ ಉಲ್ಲಂಘನೆ ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದ ದಂಡದ ಷರತ್ತುಗಳನ್ನು ಹಿಂಪಡೆಯುವಂತೆ ಒತ್ತಾಯಿಸುತ್ತಿದ್ದಾರೆ. ಮುಷ್ಕರದಿಂದ ಸಾರ್ವಜನಿಕರಿಗೆ ಅನಶನುಕೂಲವಾಗಲಿದೆ. ಆದ್ದರಿಂದ, ಮುಷ್ಕರವನ್ನು ಹಿಂಪಡೆಯುವಂತೆ ದಕ್ಷಿಣ ವಿಭಾಗದ ಮುಖ್ಯ ಪ್ರಧಾನ ವ್ಯವಸ್ಥಾಪಕರು ಕೋರಿದ್ದಾರೆ” ಎಂದು ಕಂಪನಿಗಳು ಹೇಳಿವೆ.