ಮುಂಬೈ: ಕೇಂದ್ರ ಸಚಿವ ನಿತಿನ್ ಗಡ್ಕರಿ ನಿವಾಸಕ್ಕೆ ಬಾಂಬ್ ಬೆದರಿಕೆ ಹಾಕಿರುವ ಘಟನೆ ನಾಗ್ಪುರದಲ್ಲಿ ನಡೆದಿದೆ.
ನಿತಿನ್ ಗಡ್ಕರಿ ಅವರ ನಾಗ್ಪುರ ನಿವಾಸಕ್ಕೆ ಇಂದು ಬೆಳಿಗ್ಗೆ 8:46ರ ಸುಮಾರಿಗೆ ಬಾಂಬ್ ಬೆದರಿಕೆ ಕರೆ ಬಂದಿತ್ತು. ವಾರ್ಧಾ ರಸ್ತೆಯಲ್ಲಿರುವ ಗಡ್ಕರಿ ಅವರ ಮನೆ ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿತ್ತು. ತಕ್ಷಣ ಪೊಲೀಸರು ಪ್ರತಾಪ್ ನಗರ ಠಾಣೆಗೆ ಮಾಹಿತಿ ನೀಡಿದ್ದಾರೆ. ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದು, ಕೆಲವೇ ಸಮಯದಲ್ಲಿ ಶಂಕಿತನೊಬ್ಬನನ್ನು ಬಂಧಿಸಿದ್ದಾರೆ.
ಉಮೇಶ್ ವಿಷ್ಣು ರಾವತ್ ಬಂಧಿತ ಶಂಕಿತ. ಮಹಲ್ ತುಳಸಿ ಬಾಗ್ ರಸ್ತೆಯ ನಿವಾಸಿಯಾಗಿರುವ ರಾವತ್ ಮೆಡಿಕಲ್ ಚೌಕ್ ಬಳಿಯ ಮದ್ಯದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಆತ ತನ್ನ ಮೊಬೈಲ್ ನಿಂದ ಕರೆ ಮಾಡಿ ಗಡ್ಕರಿ ಅವರ ನಿವಾಸವನ್ನು 10 ನಿಮಿಷಗಳಲ್ಲಿ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಶಂಕಿತನನ್ನು ಬಿಮಾ ದವಾಖಾನಾ ಬಳಿ ಬಂಧಿಸಿ ವಿಚಾರಣೆ ನಡೆಸಿದ್ದಾರೆ.