ಯಾದಗಿರಿ: ಮುಸ್ಲಿಂ ವ್ಯಕ್ತಿಯೊಬ್ಬ ಲಿಂಗದೀಕ್ಷೆ ಪಡೆದು ಮಠಾಧೀಶರಾಗಿದ್ದು ಅಲ್ಲದೇ ಮೂಲ ಧರ್ಮದ ಹೆಸರನ್ನೇ ಉಳಿಸಿಕೊಂಡಿರುವ ಪ್ರಕರಣ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಈ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.
ಮಠಾಧೀಶನಾಗಿರುವ ವ್ಯಕ್ತಿ ಮುಸ್ಲಿಂ ಧರ್ಮದವನು ಎಂಬುದು ಮಾತ್ರವಲ್ಲ. ಮಠಾಧೀಶನ ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋ, ಫೋಟೋ ಪತ್ತೆಯಾಗಿದೆ. ಯಾದಗಿರಿ ಜಿಲ್ಲೆಯ ಶಹಾಪುರ ಮೂಲದ ಮಹಮ್ಮದ್ ನಿಸಾರ್ ಎಂಬಾತ ವಿಶ್ವಗುರು ಬಸವಣ್ಣನವರ ತತ್ವಗಳಿಂದ ಪ್ರಭಾವಿತರಾಗಿದ್ದಾಗಿ ಹೇಳಿ ಕಳೆದ ವರ್ಷ ಬಸವಕಲ್ಯಾಣದ ಬಸವಪ್ರಭುಸ್ವಾಮೀಜಿಗಳಿಂದ ಜಂಗಮ ದೀಕ್ಷೆ ಪಡೆದಿದ್ದರು. ಅವರ ಹೆಸರನ್ನು ನಿಜಲಿಂಗ ಸ್ವಾಮೀಜಿ ಎಂದು ನಾಮಕರಣ ಮಾಡಲಾಗಿತ್ತು.
ಹೀಗೆ ಸ್ವಾಮೀಜಿಯಾದ ನಿಜಲಿಂಗ ಸ್ವಾಮೀಜಿ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿಯಲ್ಲಿ ಗುರುಮಲ್ಲೇಶ್ವರ ಶಾಖಾಮಠದ ನೂತನ ಕಟ್ಟಡ ನಿರ್ಮಿಸಿದ ಮಹಾದೇವ ಪ್ರಸಾದ್ ಎಂಬುವವರು ಒಂದೂವರೆ ತಿಂಗಳ ಹಿಂದೆ ಸ್ವಾಮೀಜಿಯೊಬ್ಬರ ಶಿಫಾರಸಿನ ಮೇರೆಗೆ ನಿಜಲಿಂಗ ಸ್ವಾಮೀಜಿಯವರನ್ನು ಮಠಾಧೀಶರನ್ನಾಗಿ ನೇಮಕಮಾಡಿದ್ದರು. ಮಠದಲ್ಲಿ ಧಾರ್ಮಿಕ ಪ್ರವಚನಗಳನ್ನು ಮಾಡುತ್ತ ಬಂದಿದ್ದ ನಿಜಲಿಂಗ ಸ್ವಾಮೀಜಿ ತಾವು ಮೂಲತಃ ಮುಸ್ಲಿಂ ಧರ್ಮದವರೆಂದು ಗ್ರಾಮಸ್ಥರಿಗೆ ಹೇಳಿರಲಿಲ್ಲ. ನಿಜಲಿಂಗ ಸ್ವಾಮೀಜಿ ತಮ್ಮ ಮಠದಲ್ಲಿ ಆಪ್ತರೊಬ್ಬರಿಗೆ ಮೊಬೈಲ್ ಕೊಟ್ಟಿದ್ದರು. ಅದರಲ್ಲಿ ಸ್ವಾಮೀಜಿಯವರ ಆಧಾರ್ ಕಾರ್ಡ್, ಮೂಲ ಹೆಸರು, ಧರ್ಮದ ಬಗ್ಗೆ ಉಲ್ಲೇಖವಿದ್ದು, ಆಗ ವಿಷಯ ಬಹಿರಂಗವಾಗಿದೆ.
ಅಷ್ಟೇ ಅಲ್ಲ ಸ್ವಾಮೀಜಿ ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋ, ಫೋಟೋಗಳು ಪತ್ತೆಯಾಗಿದ್ದು, ಮದ್ಯ, ಮಾಂಸಾಹಾರ ಸೇವಿಸಿರುವ ಬಗ್ಗೆ, ರಾಸಲೀಲೆ ಬಗ್ಗೆಯೂ ಬಹಿರಂಗವಾಗಿದೆ. ವಿಷಯ ತಿಳಿದ ಗ್ರಾಮಸ್ಥರು ಸ್ವಾಮೀಜಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ನಿಜಲಿಂಗ ಸ್ವಾಮೀಜಿ ವಿರುದ್ಧ ಅಖಿಲ ಭಾರತ ವೀರಶೈವ ಮಹಾಸಭಾ ಕಾನೂನು ಹೋರಾಟಕ್ಕೆ ಮುಂದಾಗಿದೆ ಎಂದು ತಿಳಿದುಬಂದಿದೆ.