ಮಿಚೆಲ್ ಸ್ಯಾಂಟ್ನರ್ ನಾಯಕತ್ವದ ನ್ಯೂಜಿಲ್ಯಾಂಡ್ ಕ್ರಿಕೆಟ್ ತಂಡಕ್ಕೆ ಭಾರತದ ವಿರುದ್ಧದ 5 ಪಂದ್ಯಗಳ ಏಕದಿನ ಸರಣಿಗೂ ಮುನ್ನವೇ ಭಾರಿ ಆಘಾತ ಎದುರಾಗಿದೆ. ತಂಡದ ಪ್ರಮುಖ ಆಟಗಾರರಾದ ಮಾರ್ಕ್ ಚಾಪ್ಮನ್ ಹಾಗೂ ರಚಿನ್ ರವೀಂದ್ರ ಗಾಯದ ಸಮಸ್ಯೆಯಿಂದಾಗಿ ಇಡೀ ಏಕದಿನ ಸರಣಿಯಿಂದ ಹೊರಬಿದ್ದಿದ್ದಾರೆ.
ನವೆಂಬರ್ 4 ರಿಂದ ಆಕ್ಲೆಂಡ್‌ನಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಏಕದಿನ ಸರಣಿ ಪ್ರಾರಂಭವಾಗಲಿದ್ದು, ತದನಂತರ ವೆಲ್ಲಿಂಗ್ಟನ್, ಹ್ಯಾಮಿಲ್ಟನ್ ಹಾಗೂ ಮೌಂಟ್ ಮೌಂಗನುಯಿಯಲ್ಲಿ ಉಳಿದ ಪಂದ್ಯಗಳು ನಡೆಯಲಿವೆ. ಮಾರ್ಕ್ ಚಾಪ್ಮನ್ ತೊಡೆಯೆಲುಬಿನ (ಹ್ಯಾಮ್‌ಸ್ಟ್ರಿಂಗ್) ಗಾಯದಿಂದ ಬಳಲುತ್ತಿದ್ದು, ಚೇತರಿಸಿಕೊಳ್ಳಲು ಇನ್ನು ಎರಡು ವಾರಗಳ ಕಾಲಾವಕಾಶ ಅಗತ್ಯವಿದೆ. ಇತ್ತ ರಚಿನ್ ರವೀಂದ್ರ ಹೆಗಲ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮುಂಬರುವ ಟೆಸ್ಟ್ ಸರಣಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಚಿನ್ ಅವರಿಗೆ ವಿಶ್ರಾಂತಿ ನೀಡಲು ನ್ಯೂಜಿಲ್ಯಾಂಡ್ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ.
ಈ ಇಬ್ಬರು ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ವಿಕೆಟ್‌ಕೀಪರ್ ಬ್ಯಾಟರ್ ಟಿಮ್ ಸೀಫರ್ಟ್ ಐದೂ ಪಂದ್ಯಗಳಿಗೆ ಲಭ್ಯವಿರಲಿದ್ದಾರೆ. ಮೊದಲ ಮೂರು ಪಂದ್ಯಗಳಿಗೆ ಹೆನ್ರಿ ನಿಕೋಲ್ಸ್ ಮತ್ತು ಕೊನೆಯ ಎರಡು ಪಂದ್ಯಗಳಿಗೆ ಡೀನ್ ಫಾಕ್ಸ್‌ಕ್ರಾಫ್ಟ್ ತಂಡವನ್ನು ಸೇರಿಕೊಳ್ಳಲಿದ್ದಾರೆ. ಪ್ರಮುಖ ಆಟಗಾರರ ಗೈರುಹಾಜರಿ ಹಿನ್ನಡೆಯಾದರೂ ತಂಡದಲ್ಲಿ ಸೂಕ್ತ ಪರ್ಯಾಯ ಆಟಗಾರರಿದ್ದಾರೆ ಎಂದು ಕಿವೀಸ್ ಮುಖ್ಯ ತರಬೇತುದಾರ ರಾಬ್ ವಾಲ್ಟರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೊದಲ ಮೂರು ಪಂದ್ಯಗಳಿಗೆ ನ್ಯೂಜಿಲ್ಯಾಂಡ್ ತಂಡ: ಮಿಚೆಲ್ ಸ್ಯಾಂಟ್ನರ್ (ನಾಯಕ), ಮೈಕಲ್ ಬ್ರೇಸ್‌ವೆಲ್, ಡೆವೊನ್ ಕಾನ್ವೇ, ಜೇಕಬ್ ಡಫಿ, ಮ್ಯಾಟ್ ಫಿಶರ್, ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್, ಟಾಮ್ ಲ್ಯಾಥಮ್, ಡ್ಯಾರಿಲ್ ಮಿಚೆಲ್, ಹೆನ್ರಿ ನಿಕೋಲ್ಸ್, ಗ್ಲೆನ್ ಫಿಲಿಪ್ಸ್, ಟಿಮ್ ಸೀಫರ್ಟ್, ನಾಥನ್ ಸ್ಮಿತ್, ವಿಲ್ ಯಂಗ್, ಬ್ಲೇರ್ ಟಿಕ್ನರ್.

