ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ವಹಿವಾಟುಗಳನ್ನು ಹೆಚ್ಚು ಸುರಕ್ಷಿತವಾಗಿಸಲು ಮತ್ತು ಕಳ್ಳ ನೋಟುಗಳ ಹಾವಳಿಯನ್ನು ತಡೆಯಲು ಹೊಸ ವಿನ್ಯಾಸದ 500 ರೂಪಾಯಿ ಮತ್ತು 10 ರೂಪಾಯಿ ಮುಖಬೆಲೆಯ ನೋಟುಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಪ್ರಕಟಿಸಿದೆ. ಮಹಾತ್ಮ ಗಾಂಧಿ ಸರಣಿಯ ಈ ಹೊಸ ನೋಟುಗಳು ವಿಶಿಷ್ಟ ವಿನ್ಯಾಸ ಮತ್ತು ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿರಲಿವೆ.
ಆರ್‌ಬಿಐ ವೆಬ್‌ಸೈಟ್ ಮಾಹಿತಿ ಪ್ರಕಾರ, ಹೊಸ 500 ರೂಪಾಯಿ ನೋಟಿನ ಹಿಂಭಾಗದಲ್ಲಿ ಕೆಂಪು ಕೋಟೆಯ ಆಕರ್ಷಕ ಚಿತ್ರವಿದ್ದು, ಇದು ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುತ್ತದೆ. ಸ್ಟೋನ್ ಗ್ರೇ ಬಣ್ಣದಲ್ಲಿರುವ ಈ ನೋಟು 66 ಮಿಮೀ x 150 ಮಿಮೀ ಗಾತ್ರವನ್ನು ಹೊಂದಿದೆ. ಇನ್ನು ಹೊಸ 10 ರೂಪಾಯಿ ನೋಟಿನ ಹಿಂಭಾಗದಲ್ಲಿ ಕೋನಾರ್ಕ್‌ನ ಸೂರ್ಯ ದೇವಾಲಯದ ಸುಂದರ ಚಿತ್ರವಿದ್ದು, ಚಾಕೊಲೇಟ್ ಬ್ರೌನ್ ಬಣ್ಣದಲ್ಲಿ 63 ಮಿಮೀ x 123 ಮಿಮೀ ಗಾತ್ರವನ್ನು ಹೊಂದಿದೆ.
ಹೊಸ ನೋಟುಗಳಲ್ಲಿ ಹಲವಾರು ಭದ್ರತಾ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ. 500 ರೂಪಾಯಿ ನೋಟಿನಲ್ಲಿ ನೋಟಿನ ಮೂಲಕ ಬೆಳಕು ನೋಡಿದಾಗ ಮುಖಬೆಲೆ ಮತ್ತು ಗಾಂಧೀಜಿಯ ಚಿತ್ರ ಕಾಣಿಸುತ್ತದೆ, ವಾಟರ್‌ಮಾರ್ಕ್, ಏರಿಕೆಯ ಕ್ರಮದಲ್ಲಿರುವ ಸಂಖ್ಯೆಗಳು, ದೇವನಾಗರಿಯಲ್ಲಿ ಮುಖಬೆಲೆ, ಸೂಕ್ಷ್ಮ ಅಕ್ಷರಗಳು, ಬಣ್ಣ ಬದಲಾಯಿಸುವ ಭದ್ರತಾ ದಾರ ಮತ್ತು ರೂ. ಚಿಹ್ನೆಯೊಂದಿಗೆ ಮುಖಬೆಲೆ ಮುಂತಾದ ವೈಶಿಷ್ಟ್ಯಗಳಿವೆ. ದೃಷ್ಟಿಹೀನರಿಗಾಗಿ ಎತ್ತರಿಸಿದ ಮುದ್ರಣ ಮತ್ತು ಸ್ಪರ್ಶದಿಂದ ಗುರುತಿಸಬಹುದಾದ ವಿನ್ಯಾಸಗಳನ್ನು ಸಹ ನೀಡಲಾಗಿದೆ.
ಹೊಸ 10 ರೂಪಾಯಿ ನೋಟಿನಲ್ಲೂ ಇದೇ ರೀತಿಯ ಭದ್ರತಾ ವೈಶಿಷ್ಟ್ಯಗಳಿದ್ದು, ಕೋನಾರ್ಕ್ ಸೂರ್ಯ ದೇವಾಲಯದ ಚಿತ್ರವು ಗಮನ ಸೆಳೆಯುತ್ತದೆ. ಆರ್‌ಬಿಐ ಈ ಹೊಸ ನೋಟುಗಳನ್ನು ಬಿಡುಗಡೆ ಮಾಡುವುದರಿಂದ ವಹಿವಾಟುಗಳು ಹೆಚ್ಚು ಸುರಕ್ಷಿತವಾಗಲಿವೆ ಎಂದು ನಿರೀಕ್ಷಿಸಲಾಗಿದೆ. ಸದ್ಯ ಚಲಾವಣೆಯಲ್ಲಿರುವ ಹಳೆಯ ನೋಟುಗಳು ಸಹ ಮುಂದುವರಿಯಲಿವೆ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.