ನೀಟ್ ಪರೀಕ್ಷೆಯ ಒತ್ತಡಕ್ಕೆ ಸಿಲುಕಿ 20 ವರ್ಷದ ಯುವಕನೊಬ್ಬ ತಾಯಿಯನ್ನು ಕೊಲೆ ಮಾಡಿದ್ದು, ತಂದೆಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ. ಕೋಟಾದಲ್ಲಿ ಕೋಚಿಂಗ್ ಮುಗಿಸಿ ವಾಪಸ್ಸಾಗಿದ್ದ ಸತ್ಯಂ ಕಾಟ್ರೆ ಎಂಬ ಯುವಕ ಕಬ್ಬಿಣದ ರಾಡ್‌ನಿಂದ ತಂದೆ-ತಾಯಿಯ ಮೇಲೆ ಹಲ್ಲೆ ಮಾಡಿದ್ದಾನೆ.
ಸೋಮವಾರ ರಾತ್ರಿ ಮೊಬೈಲ್ ಫೋನ್ ಬಳಸದಂತೆ ತಂದೆ ತಡೆದಿದ್ದರಿಂದ ಕೋಪಗೊಂಡ ಸತ್ಯಂ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಸತ್ಯಂನನ್ನು ಬಂಧಿಸಲಾಗಿದ್ದು, ಕೊಲೆ ಮತ್ತು ಕೊಲೆ ಯತ್ನದ ಪ್ರಕರಣ ದಾಖಲಿಸಲಾಗಿದೆ. ಗಾಯಗೊಂಡ ತಂದೆ ಕಿಶೋರ್ ಗೊಂಡಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತನ್ನ ಪೋಷಕರು ವೈದ್ಯರಾಗಬೇಕೆಂದು ಒತ್ತಾಯಿಸುತ್ತಿದ್ದರು. ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣನಾಗಲು ಸಾಧ್ಯವಾಗದ ಕಾರಣ ಈ ಕೃತ್ಯ ಎಸಗಿದ್ದೇನೆ ಎಂದು ಸತ್ಯಂ ವಿಚಾರಣೆ ವೇಳೆ ತಿಳಿಸಿದ್ದಾನೆ.
ಕಳೆದ ವರ್ಷ ಕೋಟಾದಲ್ಲಿ ಕೋಚಿಂಗ್‌ಗೆ ಹೋಗಿದ್ದ ಸತ್ಯಂ ಕೆಲವೇ ತಿಂಗಳಲ್ಲಿ ವಾಪಸ್ಸಾಗಿದ್ದ. ಕೋಟಾದಲ್ಲಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಘಟನೆಗಳು ಹೆಚ್ಚುತ್ತಿವೆ.
ಸತ್ಯಂ ಕೋಟಾದಿಂದ ಹಿಂದಿರುಗಿದ ನಂತರ “ಬದಲಾದ ವ್ಯಕ್ತಿ”ಯಾಗಿದ್ದ ಎಂದು ಆತನ ಚಿಕ್ಕಪ್ಪ ಅರವಿಂದ್ ಕಾಟ್ರೆ ತಿಳಿಸಿದ್ದಾರೆ.
ಈ ಘಟನೆ ಭಾರತದ ಸ್ಪರ್ಧಾತ್ಮಕ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳ ಯೋಗಕ್ಷೇಮ ಮತ್ತು ಮಾನಸಿಕ ಆರೋಗ್ಯ ಬೆಂಬಲಕ್ಕೆ ಹೆಚ್ಚಿನ ಒತ್ತು ನೀಡುವ ಅಗತ್ಯವನ್ನು ತೋರಿಸುತ್ತದೆ.