ಮಂಗಳೂರು: ನಗರದ ಮಂಗಳ ಸ್ಟೇಡಿಯಂ ಸಮೀಪ ಇರುವ ಮಹಾನಗರ ಪಾಲಿಕೆಯ ಈಜುಕೊಳದಲ್ಲಿ ಈಜು ತರಬೇತುದಾರರಾಗಿ ಅನೇಕ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ರಾಷ್ಟ್ರೀಯ ಈಜುಪಟು ಕೆ. ಚಂದ್ರಶೇಖರ(52) ಭಾನುವಾರ ಬೆಳಗ್ಗೆ ಈಜುತ್ತಿದ್ದ ವೇಳೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಹೃದಯಾಘಾತದಿಂದ ಚಂದ್ರಶೇಖರ್ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಬಂಟ್ವಾಳ ತಾಲೂಕು ಸೂರಿಕುಮೇರು ಮೂಲದವರಾದ ಚಂದ್ರಶೇಖರ್ ರೈ ಅವರು ಮಂಗಳೂರಿನ ಕುದ್ರೋಳಿ ಸಮೀಪ ವಾಸವಾಗಿದ್ದರು. ಅವರಿಗೆ ಪತ್ನಿ, ಪುತ್ರಿ ಇದ್ದಾರೆ. ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಂದ್ರಶೇಖರ್ ರೈ ಅವರು ಕಳೆದ ಆರು ವರ್ಷಗಳಿಂದ ಮಹಾನಗರ ಪಾಲಿಕೆ ಈಜುಕೊಳದಲ್ಲಿ ಕೋಚ್ ಮತ್ತು ಲೈಫ್ ಗಾರ್ಡ್ ಆಗಿದ್ದರು. ಉಸಿರು ಬಿಗಿ ಹಿಡಿದುಕೊಂಡು ನೀರಿನೊಳಗೆ ಈಜುವುದರಲ್ಲಿ ಪರಿಣತಿ ಹೊಂದಿದ್ದರು. 2023ರಲ್ಲಿ ಈಜುಕೊಳದಲ್ಲಿ ನೀರಿನೊಳಗೆ ಮುಳುಗಿ ಉಸಿರು ಕಟ್ಟಿಕೊಂಡು ಒಂದು ನಿಮಿಷದಲ್ಲಿ 28 ಬಾರಿ ಸಮ್ಮರ್ ಸಾಲ್ಟ್ ಆಸನಗಳನ್ನು ಪ್ರದರ್ಶಿಸಿ ‘ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್’ ನಲ್ಲಿ ಸ್ಥಾನ ಪಡೆದುಕೊಂಡಿದ್ದರು.