ಬೆಂಗಳೂರು: ನಮ್ಮ ಮೆಟ್ರೋದ ಚಾಲಕ ರಹಿತ ಹಳದಿ ಮಾರ್ಗಕ್ಕೆ ಆಗಸ್ಟ್ ನಲ್ಲಿ ಚಾಲನೆ ಸಿಗಲಿದೆ. ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ನೆರವೇರಿಸಲಿದ್ದಾರೆ.
ಸಿಎಂಎಸ್ಆರ್ ಆಯುಕ್ತರು ಜುಲೈ 22 ರಂದು ಮಾರ್ಗದ ಅಂತಿಮ ಪರಿಶೀಲನೆ ನಡೆಸಲಿದ್ದಾರೆ. ಈಗಾಗಲೇ ಇಂಡಿಪೆಂಡೆಂಟ್ ಸೇಫ್ಟಿ ಅಸಿಸ್ಟೆಂಟ್ ಎಲ್ಲಾ ದಾಖಲೆ ಅಂಕಿ ಅಂಶವನ್ನು ಪರಿಶೀಲಿಸಿ ಪ್ರಮಾಣ ಪತ್ರವನ್ನು ರೈಲ್ವೆಯ ಮೆಟ್ರೋ ರೈಲು ಸಂರಕ್ಷಣಾ ಆಯೋಗಕ್ಕೆ ನೀಡಲಾಗಿದೆ.
ಬಸವನಗುಡಿಯ ರಾಷ್ಟ್ರೀಯ ವಿದ್ಯಾಲಯ ರಸ್ತೆ ನಿಲ್ದಾಣದಿಂದ ಸಿಲ್ಕ್ ಬೋರ್ಡ್, ಜಯದೇವ ಆಸ್ಪತ್ರೆ ಪ್ರಮುಖ ಕೇಂದ್ರಗಳ ಮೂಲಕ ಬೊಮ್ಮಸಂದ್ರದವರೆಗೆ ಸಂಪರ್ಕ ಕಲ್ಪಿಸಲಾಗಿದೆ. ಈ ಮಾರ್ಗದಲ್ಲಿ ಚಾಲಕರಹಿತ ಮೆಟ್ರೋ ರೈಲು ಕಾರ್ಯಾಚರಣೆ ನಡೆಸಲಿದ್ದು, 19.15 ಕಿಲೋಮೀಟರ್ ದೂರ ಹೊಂದಿದೆ.
ಬೊಮ್ಮಸಂದ್ರ, ಹೆಬ್ಬಗೋಡಿ, ಇನ್ಫೋಸಿಸ್ ಫೌಂಡೇಶನ್, ಎಲೆಕ್ಟ್ರಾನಿಕ್ ಸಿಟಿ, ಸಿಂಗಸಂದ್ರ, ಕೂಡ್ಲು ಗೇಟ್, ಹೊಂಗಸಂದ್ರ, ಬೊಮ್ಮನಹಳ್ಳಿ ಸೆಂಟ್ರಲ್, ಸಿಲ್ಕ್ ಬೋರ್ಡ್, ಬಿಟಿಎಂ ಲೇಔಟ್, ಜಯದೇವ ಆಸ್ಪತ್ರೆ, ರಾಗಿಗುಡ್ಡ, ಆರ್.ವಿ. ರಸ್ತೆ ನಿಲ್ದಾಣದವರೆಗೆ ಕಾರ್ಯಾಚರಣೆ ನಡೆಸಲಿದೆ. ಒಟ್ಟು 16 ನಿಲ್ದಾಣ ಒಳಗೊಂಡಿದೆ. ಈ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭವಾದ ನಂತರ ಪ್ರತಿದಿನ ಸುಮಾರು 2.6 ಲಕ್ಷ ಪ್ರಯಾಣಿಕರು ಸಂಚರಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಬೆಂಗಳೂರಿನ ವಿಸ್ತರಿಸುತ್ತಿರುವ ಮೆಟ್ರೋ ಜಾಲದ ಭಾಗವಾಗಿರುವ ನಮ್ಮ ಮೆಟ್ರೋ ಹಳದಿ ಮಾರ್ಗವು ನಗರದ ಸಂಚಾರ ದಟ್ಟಣೆಯಿಂದ ಬಳಲುತ್ತಿರುವ ಪ್ರಯಾಣಿಕರಿಗೆ ಪ್ರಮುಖ ಪರಿಹಾರವನ್ನು ನೀಡಲು ಸಜ್ಜಾಗಿದೆ. ಈ ಹೊಸ ಮಾರ್ಗವು ನಗರದ ಪ್ರಮುಖ ವಸತಿ ಮತ್ತು ಕೈಗಾರಿಕಾ ವಲಯಗಳಲ್ಲಿ ಸಾರ್ವಜನಿಕ ಸಾರಿಗೆ ಪ್ರವೇಶವನ್ನು ಸುಧಾರಿಸುವ ನಿರೀಕ್ಷೆಯಿದೆ.