ಮೈಸೂರು: ರಾಜ್ಯಾದ್ಯಂತ ಮುಂಗಾರು ಮಳೆ ಅಬ್ಬರಕ್ಕೆ ಸಾಲು ಸಾಲು ಅವಾಂತರಗಳು ಸೃಷ್ಟಿಯಾಗುತ್ತಿವೆ. ಕರಾವಳಿ, ಮಲೆನಡು ಜಿಲ್ಲೆಗಳಲ್ಲಿ ಅಲರ್ಟ್ ಘೋಷಿಸಲಾಗಿದೆ. ಹಲ್ವು ಪ್ರವಾಸಿ ತಾಣಗಳಿಗೆ, ಫಾಲ್ಸ್, ಸಮುದ್ರ ತೀರ, ಅರಣ್ಯ ಪ್ರದೇಶಗಳಿಗೆ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಈ ನಡುವೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಎರಡು ಕಡೆ ಸಫಾರಿ ಬಂದ್ ಮಾಡಲಾಗಿದೆ.
ಈ ಬಗ್ಗೆ ಅರಣ್ಯ ಇಲಾಖೆ ಮಾಹಿತಿ ನೀಡಿದೆ. ಮೈಸೂರು, ಕೊಡಗು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ನಾಗರಹೊಳೆ ಅರಣ್ಯ ಪ್ರದೇಶದಲ್ಲಿಯೂ ವರುಣಾರ್ಭಟ ಜೋರಾಗಿದೆ. ಈ ಹಿನ್ನೆಲೆಯಲ್ಲಿ ಸಫಾರಿಯನ್ನು ಅನಿರ್ಧಿಷ್ಟಾವಧಿಗೆ ಸ್ಥಗಿತಗೊಳಿಸಲಾಗಿದೆ.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಕೊಡಗಿನ ಕುಟ್ಟ ಸಮೀಪದ ನಣಚ್ಚಿ ಗೇಟ್ ಹಾಗೂ ಮೈಸೂರು ಜಿಲ್ಲೆಯ ವೀರನಹೊಸಳ್ಳಿ ಸಫಾರಿಯನ್ನು ರದ್ದು ಮಾಡಲಾಗಿದೆ.
ಆದರೆ ಹೆಚ್.ಡಿ.ಕೋಟೆ ತಾಲೂಕಿನ ದಮ್ಮನಕಟ್ಟೆ ಕೇಂದ್ರದಲ್ಲಿ ಸಫಾರಿ ಎಂದಿನಂತೆ ಮುಂದುವರೆಯಲಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.