ಮೈಸೂರು: ಕಾಲೇಜುಗಳಲ್ಲಿ ನಡೆಯುತ್ತಿದ್ದ ರ್ಯಾಗಿಂಗ್ ಇದೀಗ ಪ್ರಾಥಮಿಕ ಶಾಲೆಗಳಲ್ಲಿಯೂ ಆರಂಭವಾಗಿದೆ. ಮೈಸೂರಿನ ಪ್ರತಿಷ್ಠ ಖಾಸಗಿ ಶಾಲೆಯಲ್ಲಿ 14 ವರ್ಷದ ವಿದ್ಯಾರ್ಥಿ ಮೇಲೆ ಸಹಪಾಠಿಗಳೇ ರ್ಯಾಗಿಂಗ್ ಮಾಡಿರುವ ಘಟನೆ ನಡೆದಿದೆ.
ಕ್ಲಾಸ್ ಲೀಡರ್ ಆಗಿದ್ದ ವಿದ್ಯಾರ್ಥಿಗೆ ಇತರ ವಿದ್ಯಾರ್ಥಿಗಳು ಹಣ ಕೊಡುವಂತೆ ಒತಾಯಿಸುವುದು, ಆತನ ಮೊಬೈಲ್ ಕಸಿದುಕೊಳ್ಳುವುದು ಮಾಡುತ್ತಿದ್ದರು. ಬರಬರುತ್ತಾ ಹಣ ಕೊಡದಿದ್ದರೆ ಹಲ್ಲೆ ನಡೆಸುತ್ತಿದ್ದರು. ಎರಡು ದಿನಗಳ ಹಿಂದೆ ಶಾಲೆಯಲ್ಲಿ ವಾಶ್ ರೂಂ ಗೆ ಹೋಗಿದ್ದ ವಿದ್ಯಾರ್ಥಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ವಿದ್ಯಾರ್ಥಿಯ ಮರ್ಮಾಂಗಕ್ಕೆ ಒದ್ದು ಗಾಯಗೊಳಿಸಿದ್ದಾರೆ. ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪೋಷಕರು ಶಾಲೆಯ ಆಡಳಿತ ಮಂಡಳಿ, ಮುಖ್ಯಶಿಕ್ಷಕರಿಗೆ ದೂರು ನೀಡಿದರೆ ಉಡಾಫೆ ಉತ್ತರ ನೀಡುತ್ತಿದ್ದಾರೆ. ಇದರಿಂದ ನೊಂದ ಪೋಷಕರು ಹಾಗೂ ಗಾಯಾಳು ವಿದ್ಯಾರ್ಥಿ ಪೊಲೀಸರಿಗೆ ದೂರು ನೀಡಿದ್ದಾರೆ.
