ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಅಲಿಯಾಸ್ ಶಿವಪ್ರಕಾಶ್ ಹತ್ಯೆ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಕೊಲೆಯಾದ ಬಿಕ್ಲು ಶಿವ ತಾಯಿ ನೀಡಿರಿವ ದೂರಿನ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಬೈರತಿ ಬಸವರಾಜ್ ಸೇರಿದಂತೆ ಐವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಈ ನಡುವೆ ಪ್ರಕರಣ ಸಂಬಂಧ ಐವರು ಆರೋಪಿಗಳು ಕೊಲೆ ಮಾಡಿದ್ದು ತಾವೆಂದು ಪೊಲೀಸ್ ಸ್ಟೇಷನ್ ಗೆ ಬಂದು ಶರಣಾಗಿರುವ ಘಟನೆ ನಡೆದಿದೆ.
ಬಿಕ್ಲು ಶಿವ ಕೊಲೆ ಕೇಸ್ ಹೊಸ ತಿರುವು ಪಡೆದುಕೊಳ್ಳುತ್ತಿರುವಂತಿದೆ. ಶಾಸಕ ಬೈರತಿ ಬಸವರಾಜ್ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಕೇಸ್ ವಿಚಿತ್ರ ತಿರುವು ಪಡೆಯುತ್ತಿದೆ. ಭಾರತಿನಗರ ಠಾಣೆಗೆ ಐವರು ಆರೋಪಿಗಳು ಬಂದು ಶರಣಾಗಿದ್ದಾರೆ ಎನ್ನಲಾಗಿದ್ದು, ತಾವೇ ಬಿಕ್ಲು ಶಿವನ ಕೊಲೆ ಮಾಡಿದ್ದಾಗಿ ಹೇಳಿಕೆ ಕೊಟ್ಟಿದ್ದಾರೆ.
ಕಿರಣ್ , ವಿಮಲ್, ಜಗದೀಶ್ ಸೇರಿದಂತೆ ಐವರು ಆರೋಪಿಗಳು ಶರಣಾಗಿದ್ದಾರೆ. ಆರೋಪಿ ಕಿರಣ್, ಜಗದೀಶ್ ಭಾವ ಬಾಮೈದ ಎಂದು ತಿಳಿದುಬಂದಿದೆ. ವಿಚಾರಣೆ ವೇಳೆ ಆರೋಪಿ ಕಿರಣ್ ತನಗೂ ಬಿಕ್ಲು ಶಿವಗೂ ದ್ವೇಷವಿತ್ತು. ಹಳೇ ವೈಷಮ್ಯಕ್ಕೆ ತಾನೇ ಕೊಲೆ ಮಾಡಿದ್ದೇನೆ. ಇದರಲ್ಲಿ ಜಗ್ಗು ಅಲಿಯಾಸ್ ಜಗದೀಶ್ ಪಾತ್ರವಿಲ್ಲ ಎಂದಿದ್ದಾನೆ ಎಂದು ತಿಳಿದುಬಂದಿದೆ. ಸದ್ಯ ಪೊಲೀಸರು ಆರೋಪಿಗಳ ವಿಚಾರಣೆ ಮುಂದುವರೆಸಿದ್ದಾರೆ.