ಬೆಂಗಳೂರು: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪಟಾಕಿ ಹಂಚಿಕೆಗೆ ಸಿದ್ಧತೆ ನಡೆಸಿದ್ದ ಬಿಜೆಪಿ ಶಾಸಕ ಮುನಿರತ್ನಗೆ ಪೊಲೀಸರು ಶಾಕ್ ನೀಡಿದ್ದಾರೆ.
ಬೆಂಗಳೂರಿನ ಆರ್.ಆರ್.ನಗರ ಬಿಜೆಪಿ ಶಾಸಕ ಮುನಿರತ್ನ ಅವರ ಕಚೇರಿಗೆ ಪೊಲೀಸರು ಬೀಗ ಜಡಿದಿದ್ದಾರೆ. ದೀಪಾವಳಿ ಸಮೀಪಿಸುತ್ತಿದ್ದಂತೆ ಪ್ರತಿ ವರ್ಷ ಮುನಿರತ್ನ ಕಚೇರಿಯಿಂದ ಜನರಿಗೆ ಪಟಾಕಿ ಹಂಚಲಾಗುತ್ತಿತ್ತು. ಪ್ರತಿವರ್ಷದಂತೆ ಈ ವರ್ಷವೂ ಶಾಸಕರ ಕಚೇರಿ ಬಳಿ ಪಟಾಕಿ ಹಂಚಿಕೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆರ್.ಆರ್.ನಗರದ ಲಕ್ಷ್ಮೀದೇವಿ ನಗರದಲ್ಲಿರುವ ಶಾಸಕ ಮುನಿರತ್ನ ಕಚೇರಿ ಬಳಿ ವೇದಿಕೆ ನಿರ್ಮಿಸಿ ಪಟಾಕಿ ಹಂಚಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಸ್ಥಳಕ್ಕೆ ದೌಡಾಯಿಸಿದ ಆರ್.ಆರ್.ನಗರ ಪೊಲೀಸರು ಪಟಾಕಿ ಹಂಚಿಕೆಗೆ ತಡೆಯೊಡ್ಡಿದ್ದಾರೆ.
ಶಾಸಕರು ಕಚೇರಿಗೆ ಬರುವ ಮುನ್ನವೇ ಶಾಸಕ ಮುನಿರತ್ನ ಕಚೇರಿಗೆ ಪೊಲೀಸರು ಬೀಗ ಜಡಿದಿದ್ದಾರೆ. ಅಲ್ಲದೇ ಕಚೇರಿಗೆ ಪೊಲೀಸರನ್ನು ನಿಯೋಜಿಸಲಾಗಿದೆ. ಈ ವೇಳೆ ಸ್ಥಳಕ್ಕಾಗಮಿಸಿ ಶಾಸಕ ಮುನಿರತ್ನ, ಹಬ್ಬದ ಸಂದರ್ಬದಲ್ಲಿ ಬಡವರು, ಕಾರ್ಮಿಕರ ಮಕ್ಕಳಿಗೆ ಸಾರ್ವಜನಿಕರಿಗೆ ಪಟಾಕಿ ಹಂಚುತ್ತೇವೆ. ಅದಕ್ಕೂ ಅವಕಾಶ ಕೊಡಲ್ಲ ಅಂದರೆ ಹೇಗೆ? ಬಡವರು ಹಬ್ಬ ಆಚರಿಸಲು ಅವಕಾಶವಿಲ್ಲವೇ ಎಂದು ಪ್ರಶ್ನಿಸಿದರು. ಈ ವೇಳೆ ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ಪಟಾಕಿ ಹಂಚಿಕೆಗೆ ತಡೆ ನೀಡಲಾಗಿದೆ. ಯಾವ ಕಾರಣಕ್ಕೂ ಶಾಸಕರಿಂದ ಪಟಾಕಿ ಹಂಚಿಕೆಗೆ ಅವಕಾಶವಿಲ್ಲ, ನಿಯಮ ಮೀರಿ ಪಟಾಕಿ ಹಂಚಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.