ಮುಂಬೈ: ತನ್ನ ಮುದ್ದಿನ ಬೆಕ್ಕನ್ನು ನೆರೆಮನೆಯ ಸಾಕು ಶ್ವಾನ ಬೆನ್ನಟ್ಟಿದ್ದಕ್ಕೆ ಕೋಪಗೊಂಡ ಮಹಿಳೆಯೊಬ್ಬಳು ನಾಯಿಗೆ ಆಸಿಡ್ ಎರಚಿರುವ ಆಘಾತಕಾರಿ ಘಟನೆ ವಾಣಿಜ್ಯ ನಗರಿ ಮುಂಬೈನಲ್ಲಿ ನಡೆದಿದೆ.
ಬುಧವಾರದಂದು ಈ ಘಟನೆ ನಡೆದಿದೆ. 35 ವರ್ಷದ ಶಬಿಸ್ತಾ ಸುಹೇಲ್ ಅನ್ಸಾರಿ ಎಂಬ ಮಹಿಳೆಯು ಬೀದಿಯಲ್ಲಿ ಮಲಗಿದ್ದ ತನ್ನ ನೆರೆಯ ಸಾಕುನಾಯಿ ಬ್ರೌನಿ ಮೇಲೆ ಆಸಿಡ್ ದಾಳಿ ಮಾಡಿದ್ದಾಳೆ.
ತನ್ನ ಮುದ್ದಿನ ಬೆಕ್ಕನ್ನು ನೆರೆಮನೆಯ ಸಾಕುನಾಯಿ ಬೆನ್ನಟ್ಟುತ್ತಿರುವುದನ್ನು ನೋಡಿ ಹಲವು ಸಹ ನಾಯಿಯ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಳು. ಆದರೆ, ಇದನ್ನು ಅವರು ನಿರ್ಲಕ್ಷಿಸಿದ್ದರು. ಇದೀಗ ಮಹಿಳೆ ಸಿಟ್ಟಿನಲ್ಲಿ ಶ್ವಾನದ ಮೇಲೆ ಆಸಿಡ್ ಎರಚಿದ್ದಾಳೆ. ಪ್ರಾಣಿ ಹಿಂಸೆ ಆರೋಪದಡಿ ಬಂಧನಕ್ಕೊಳಗಾಗಿದ್ದಾಳೆ.
ಈ ಘೋರ ಘಟನೆಯು ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿದ್ದು, ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದಕ್ಕೆ ನೆಟ್ಟಿಗರು ಕೂಡ ಭಾರಿ ಆಕ್ರೋಶ ಹೊರ ಹಾಕಿದ್ದಾರೆ. ಶಬಿಸ್ತಾ ಬೀದಿಯಲ್ಲಿ ಮಲಗಿದ್ದ ನಾಯಿಯ ಬಳಿಗೆ ಬಂದು ಆಸಿಡ್ ಎರಚಿದ್ದಾಳೆ. ಆಸಿಡ್ ದಾಳಿಯಿಂದ ಅಸಹಾಯಕ ಪ್ರಾಣಿ ನೋವಿನಿಂದ ನರಳುತ್ತಾ ಸ್ಥಳದಿಂದ ಓಡಿದೆ.
ಕಟ್ಟಡದ ಉಸ್ತುವಾರಿ ಬಾಳಾಸಾಹೇಬ್ ತುಕಾರಾಂ ಅವರು ಗಾಯಗೊಂಡ ನಾಯಿಯನ್ನು ಕಂಡು ಸಂಜೆ ಹತ್ತಿರದ ಪಶುವೈದ್ಯಕೀಯ ಚಿಕಿತ್ಸಾಲಯಕ್ಕೆ ಕರೆದೊಯ್ದಿದ್ದಾರೆ. ಆಸಿಡ್ ದಾಳಿಯಲ್ಲಿ ಶ್ವಾನ ಕಣ್ಣು ಕಳೆದುಕೊಂಡಿದ್ದು, ತೀವ್ರ ಸುಟ್ಟ ಗಾಯಗಳಿಂದ ಬಳಲುತ್ತಿದೆ.
ತುಕಾರಾಂ ಅವರು ಕಟ್ಟಡದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಶಬಿಸ್ತಾ ನಾಯಿಯ ಮೇಲೆ ಆಸಿಡ್ ಎರಚುವುದರ ವಿಡಿಯೋ ನೋಡಿದ ಅವರು ಆಕೆಯ ವಿರುದ್ಧ ದೂರು ದಾಖಲಿಸಿದರು. ದೂರಿನ ಆಧಾರದ ಮೇಲೆ ಪೊಲೀಸರು ಶಬಿಸ್ತಾಳನ್ನು ಬಂಧಿಸಿ, ಆಕೆಯ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 429 ಮತ್ತು 11 (1) ಮತ್ತು ಮಹಾರಾಷ್ಟ್ರ ಪೊಲೀಸ್ ಕಾಯ್ದೆಯ ಸೆಕ್ಷನ್ 119 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
https://twitter.com/priyarajputlive/status/1692463428307165551?ref_src=twsrc%5Etfw%7Ctwcamp%5Etweetembed%7Ctwterm%5E1692463428307165551%7Ctwgr%5Eb0b5a293d2b3be3b02ad0319258dccf89d3400e9%7Ctwcon%5Es1_&ref_url=https%3A%2F%2Fwww.india.com%2Fviral%2Fwatch-mumbai-woman-throws-acid-at-neighbours-dog-for-chasing-her-cat-arrested-for-animal-cruelty-6237352%2F