ಮುಂಬೈ: ಹದಿಹರೆಯದ ಸಲಿಂಗಿ ಸ್ನೇಹಿತರ ಸಂಬಂಧ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಡೆದಿದೆ. ಯುವಕನೊಬ್ಬ ತನ್ನ ಸಲಿಂಗಿ ಗೆಳೆಯನನ್ನು ವಿಷವಿಟ್ಟು ಸಾಯಿಸಿರುವ ಘಟನೆ ಮುಂಬೈನಲ್ಲಿ ಬೆಳಕಿಗೆ ಬಂದಿದೆ.
16 ವರ್ಷದ ಸಲಿಂಗಿ ಗೆಳೆಯನನ್ನು ತಂಪು ಪಾನೀಯದಲ್ಲಿ ವಿಷ ಬೆರೆಸಿಕೊಟ್ಟು ಹತ್ಯೆ ಮಾಡಿದ್ದಾನೆ. ಪ್ರಕರಣ ಸಂಬಂಧ 19 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಮೃತನ ತಂದೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ಜೂನ್ 29ರಂದು ತನ್ನ ಮಗ ಹಾಗೂ ಇನ್ನೋರ್ವ ಯುವಕ ಇಬ್ಬರೂ ಮನೆಯಿಂದ ಹೊರ ಹೋದವರು ವಾಪಸ್ ಆಗಿಲ್ಲ. ಹುಡುಕಾಟ ನಡೆಸಿದಾಗ ಬಳಿಕ ಇಬ್ಬರ ಸುಳಿವು ಪತ್ತೆಯಾಗಿದೆ. ಸ್ಥಳಕ್ಕೆ ಹೋಗಿ ನೋಡಿದಾಗ ನನ್ನ ಮಗ ಹಾಸಿಗೆಯಲ್ಲಿ ಬಿದ್ದಿದ್ದ. ಆತನ ಪಕ್ಕದಲ್ಲೇ ಸ್ನೇಹಿತ ಕುಳಿತಿದ್ದ ಎಂದು ತಿಳಿಸಿದ್ದಾರೆ. ನಾಲ್ಕು ತಿಂಗಳ ಹಿಂದೆ ಆರೋಪಿ ನನ್ನ ಮಗನನ್ನು ನಾಗ್ಪುರಕ್ಕೆ ಕರೆದೊಯ್ದಿದ್ದ. ಮನೆಯಲ್ಲಿ ಹೇಳದೇ ಹೋಗಿದ್ದರು. ನಾಗ್ಪುರಕ್ಕೆ ತೆರಳಿದ್ದು ಗೊತಾದ ಬಳಿಕ ನನ್ನ ಮಗನಿಗೆ ನಿನ್ನ ಸ್ನೇಹಿತನಿಂದ ದೂರವಿರು ಎಂದು ಎಚ್ಚರಿಸಿದ್ದೆ. ಬಳಿಕ ನನ್ನ ಮಗ ಆತನ ಸ್ನೇಹದಿಂದ ದೂರಾಗಿದ್ದ. ಇದರಿಂದ ಕೋಪಗೊಂಡು ಆತ ನನ್ನ ಮಗನನ್ನು ಸಾಯಿಸಿದ್ದಾನೆ ಎಂದು ಆರೋಪಿಸಿದ್ದಾರೆ.
ತಂದೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಯುವಕ ತನ್ನ ಸಲಿಂಗಿ ಗೆಳೆಯನಿಗೆ ತಂಪು ಪಾನಿಯದಲ್ಲಿ ವಿಷಹಾಕಿ ಕೊಟ್ಟಿದ್ದಾನೆ. ಅದನ್ನು ಸೇವಿಸಿದ ಯುವಕ ವಾಂತಿ ಮಾಡಿಕೊಂಡು ಸಾವನ್ನಪ್ಪಿದ್ದಾನೆ ಎಂದು ತನಿಖೆಯಲ್ಲಿ ದೃಢಪಟ್ಟಿದೆ