ವಿದ್ಯುತ್‌ ಬಿಲ್ ವಸೂಲಿ ಮಾಡಲು ಬೈಕ್ ವಶಕ್ಕೆ ಪಡೆದ ಸಿಬ್ಬಂದಿ; ಅರೆನಗ್ನ ಸ್ಥಿತಿಯಲ್ಲಿ ಅಟ್ಟಿಸಿಕೊಂಡು ಹೋದ ಮಹಿಳೆ

ವಿದ್ಯುತ್‌ ಬಿಲ್ ಪಾವತಿ ಮಾಡಲಿಲ್ಲ ಎಂಬ ಕಾರಣಕ್ಕೆ ತನ್ನ ಮನೆಯ ವಸ್ತುಗಳನ್ನು ವಶಕ್ಕೆ ಪಡೆಯಲು ಬಂದ ವಿದ್ಯುತ್‌ ಪ್ರಸರಣ ಇಲಾಖೆ ಸಿಬ್ಬಂದಿಯನ್ನು ಅರೆನಗ್ನ ಸ್ಥಿತಿಯಲ್ಲೇ ಮಹಿಳೆಯೊಬ್ಬರು ಅಟ್ಟಿಸಿಕೊಂಡು ಹೋದ ಘಟನೆ ಮಧ್ಯ ಪ್ರದೇಶದ ಸಾಗರ್‌ನಲ್ಲಿ ಜರುಗಿದೆ.

ಈ ಮಹಿಳೆ 19,000 ರೂ.ಗಳಷ್ಟು ವಿದ್ಯುತ್‌ ಬಿಲ್ ಪಾವತಿ ಮಾಡಲು ವಿಫಲರಾದ ಕಾರಣ ಮಧ್ಯ ಪ್ರದೇಶ ಪೂರ್ವ ವಲಯದ ವಿದ್ಯುತ್‌ ವಿತರಣಾ ಸಂಸ್ಥೆಯ ಸಿಬ್ಬಂದಿ ಆಕೆಯ ಮನೆಗೆ ಬಂದು ಬೈಕ್, ಹಾಸಿಗೆ ಸೇರಿದಂತೆ ಮನೆಯ ಇನ್ನಿತರ ಸಾಮಾನುಗಳನ್ನು ವಶಕ್ಕೆ ಪಡೆದು, ಅವುಗಳನ್ನೇ ಹಣ ವಸೂಲಾತಿಗೆ ಪರ್ಯಾಯ ಮಾಡಿಕೊಂಡಿದ್ದರು.

ಮನೆಯಲ್ಲಿ ಯಾರೂ ಇಲ್ಲದೇ ಇದ್ದ ಕಾರಣ ಬಾತ್ರೂಂನಲ್ಲಿದ್ದ ಈ ಮಹಿಳೆ ಅರೆನಗ್ನ ಸ್ಥಿತಿಯಲ್ಲೇ ಬಂದು ತನ್ನ ಮನೆಯ ವಸ್ತುಗಳನ್ನು ರಕ್ಷಿಸಿಕೊಳ್ಳಲು ಯತ್ನಿಸಿದ್ದಾರೆ.

ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ, ಈ ಸಂಬಂಧ ನಾಲ್ವರು ಉದ್ಯೋಗಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ರಾಜ್ಯ ಇಂಧನ ಸಚಿವ ಪ್ರಧೂಮನ್ ಸಿಂಗ್ ತಿಳಿಸಿದ್ದಾರೆ. ಘಟನೆ ಸಂಬಂಧ ತನಿಖೆ ನಡೆಸುವಂತೆ ಸಂಸ್ಥೆಯ ಹಿರಿಯ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಆದೇಶವೊಂದನ್ನು ಪಾಲಿಸಲು ಬಂದ ಸಿಬ್ಬಂದಿ ತನ್ನ ಮನೆಯ ವಸ್ತುಗಳನ್ನು ಹೀಗೆ ಕೊಂಡೊಯ್ಯುವುದನ್ನು ತಡೆಯಲು ಮಹಿಳೆ ಏನೇ ಪ್ರಯತ್ನ ಮಾಡಿದರೂ ಸಹ ಪ್ರಯೋಜನಕ್ಕೆ ಬರಲಿಲ್ಲ. ಕೊನೆಗೆ ಅರೆನಗ್ನ ಸ್ಥಿತಿಯಲ್ಲಿಯೇ ಆಕೆ ಸಿಬ್ಬಂದಿಯನ್ನು ರಸ್ತೆಯಲ್ಲಿ ಹಿಂಬಾಲಿಸಿಕೊಂಡು ಸಾಗಿದ್ದಾರೆ. ಮಹಿಳೆಯ ಕೂಗಾಟದಿಂದ ಭಯಗೊಂಡ ಉದ್ಯೋಗಿಗಳು ಮನೆಯ ವಸ್ತುಗಳನ್ನು ಆಕೆಗೆ ಮರಳಿಸಿ ಅಲ್ಲಿಂದ ಹೊರಟಿದ್ದಾರೆ.

ಮನೆಯ ವಿದ್ಯುತ್‌ ಸಂಪರ್ಕ ತನ್ನ ಸೊಸೆಯ ಹೆಸರಿನಲ್ಲಿದ್ದು, ಆ ವೇಳೆಯಲ್ಲಿ ಮಗ ಹಾಗೂ ಸೊಸೆ ಮನೆಯಲ್ಲಿ ಇಲ್ಲದೇ ಇದ್ದ ಕಾರಣ ಮಹಿಳೆಗೆ ಸೇರಿದ ವಸ್ತುಗಳನ್ನು ಸ್ಥಳದಲ್ಲೇ ಹಿಂದಿರುಗಿಸಲಾಯಿತು ಎಂದು ವಿದ್ಯುತ್ ಇಲಾಖೆ ಅಧಿಕಾರಿ ಮಂದೀಪ್ ದಿಮಾಹಾ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read