ನವದೆಹಲಿ: ದೆಹಲಿಯಲ್ಲಿ ಇಂದು ಪ್ರಧಾನಿ ಮೋದಿ ಭೇಟಿಯಾದ ಸಂಸದ ಜಗದೀಶ್ ಶೆಟ್ಟರ್ ಅವರು ಬೆಳಗಾವಿ – ಬೆಂಗಳೂರು ವಂದೇ ಭಾರತ್ ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಲು, ಬೆಳಗಾವಿ ಬಾರ್ ಅಸೋಸಿಯೇಷನ್ 150ನೇ ವಾರ್ಷಿಕೋತ್ಸವದಲ್ಲಿ ಭಾಗವಹಿಸಲು ಆಹ್ವಾನಿಸಿದ್ದಾರೆ.
ಬೆಳಗಾವಿ ಬಾರ್ ಅಸೋಸಿಯೇಷನ್ ತನ್ನ ಅಸ್ತಿತ್ವದ 150 ವರ್ಷ ಪೂರ್ಣಗೊಳಿಸಿದ ಹಿನ್ನಲೆಯಲ್ಲಿ 150ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಆಚರಿಸಿಕೊಳ್ಳುತ್ತಿದ್ದು, ಈ ಸಮಾರಂಭಕ್ಕೆ ಬೆಳಗಾವಿ ಬಾರ್ ಅಸೋಸಿಯೇಷನ್ ಅಧ್ಯಕ್ಷರ ಮನವಿಯಂತೆ ಮುಖ್ಯ ಅತಿಥಿಗಳಾಗಿ ಆಗಮಿಸುವ ಕುರಿತು, ಪ್ರಧಾನ ಮಂತ್ರಿ ಮೋದಿ ಅವರನ್ನು ಇಂದು ನವದೆಹಲಿಯ ಸಂಸದ ಭವನದ ಕಚೇರಿಯಲ್ಲಿ ಭೇಟಿ ಮಾಡಿ, ವಿನಂತಿಸಲಾಯಿತು ಎಂದು ಶೆಟ್ಟರ್ ತಿಳಿಸಿದ್ದಾರೆ.
150 ನೇ ವಾರ್ಷಿಕೋತ್ಸವ ಸಮಾರಂಭವು ತಾತ್ಕಾಲಿಕವಾಗಿ 4ನೇ ಅಕ್ಟೋಬರ 2025 ರಂದು ಆಯೋಜಿತಗೊಂಡಿರುತ್ತದೆ. ರಾಜ್ಯಾದ್ಯಂತ ಸುಮಾರು 20 ಸಾವಿರಕ್ಕೂ ಅಧೀಕ ಸಂಖ್ಯೆಯಲ್ಲಿ ವಕೀಲರ ಸಮೂಹ ಭಾಗವಹಿಸಲಿದ್ದು, ಅದರಂತೆ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಸಹ ಇದರಲ್ಲಿ ಭಾಗವಹಿಸಲಿರುವ ಹಿನ್ನಲೆಯಲ್ಲಿ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವ ಬಗ್ಗೆ ಒಪ್ಪಿಗೆ ಸೂಚಿಸುವಂತೆ ಮಾನ್ಯ ಪ್ರಧಾನ ಮಂತ್ರಿಗಳಲ್ಲಿ ವಿನಂತಿಸಲಾಯಿತು.
ಮನವಿಯನ್ನು ಅವಲೋಕಿಸಿದ ಪ್ರಧಾನ ಮಂತ್ರಿಗಳು, ಈ ಪ್ರಸ್ತಾಪಿತ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ಇದರಲ್ಲಿ ಭಾಗವಹಿಸುವ ಬಗ್ಗೆ ಭರವಸೆಯನ್ನು ನೀಡಿರುವುದರ ಕುರಿತು ತಿಳಿಸಿದರು.
ಮುಂದುವರೆದು ಬೆಳಗಾವಿ – ಬೆಂಗಳೂರು – ಬೆಳಗಾವಿ ನಡುವೆ “ವಂದೇ ಭಾರತ” ಎಕ್ಸಪ್ರೆಸ್ ರೈಲು ಸಂಚಾರಕ್ಕೆ ಈಗಾಗಲೇ ಅಧಿಸೂಚನೆ ಹೊರಡಿಸಿದ್ದು, ಅದರಂತೆ ರೈಲು ಶೀಘ್ರ ಪ್ರಸ್ತಾಪಿತ ಮಾರ್ಗದಲ್ಲಿ ಸಂಚರಿಸುವ ಬಗ್ಗೆ ಹಸಿರು ನಿಶಾನೆ ತೋರಿಸಲು ಪ್ರಧಾನ ಮಂತ್ರಿಗಳಲ್ಲಿ ಇದೇ ಸಂದರ್ಭದಲ್ಲಿ ವಿನಂತಿಸಲಾಗಿ, ಈ ಬಗ್ಗೆ ಅಗತ್ಯ ಸೂಚನೆಯನ್ನು ಕೇಂದ್ರ ರೇಲ್ವೆ ಸಚಿವರಿಗೆ ನೀಡುವುದಾಗಿ ಸಹ ಅವರು ತಿಳಿಸಿದ್ದಾರೆ.