ಅಜ್ಮೀರ್: ಹೆತ್ತ ತಾಯಿಯೊಬ್ಬಳು ಮೂರು ವರ್ಷದ ಮಗುವನ್ನು ಕಲ್ಲು ಬೇಂಚಿನ ಮೇಲೆ ಮಲಗಿಸಿ, ನಿದ್ರೆಗೆ ಜಾರಿದ್ದ ಮಗುವನ್ನು ಸರೋವರಕ್ಕೆ ಎಸೆದು ಹತ್ಯೆಗೈದಿರುವ ಹೃದಯವಿದ್ರಾವಕ ಘಟನೆ ರಾಜಸ್ಥಾನದ ಅಜ್ಮೀರ್ ನಲ್ಲಿ ನಡೆದಿದೆ.
ಅಜ್ಮೀರ್ ನ ಅನಾ ಸಾಗರ್ ಸರೋವರದ ಬಳಿ ಮಹಿಳೆಯೊಬ್ಬಳು ಮಗುವಿನೊಂದಿಗೆ ಹಲವು ಗಂಟೆಗಳ ಕಳೆದಿದ್ದಳು. ಹೀಗೆ ಕಳೆದವಳು ಮಗುವನ್ನು ಅಲ್ಲಿಯೇ ಇದ್ದ ಕಲ್ಲು ಬೆಂಚಿನ ಮೇಲೆ ಮಲಗಿಸಿದ್ದಾಳೆ. ಮಗು ನಿದ್ರೆಗೆ ಜಾರುತ್ತಿದ್ದಂತೆ ಮಗನ್ನು ಎತ್ತಿಕೊಂಡು ಹೋಗಿ ಸರೋವರಕ್ಕೆ ಎಸೆದು ಕೊಂದಿದ್ದಾಳೆ.
ಸದ್ಯ ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿದ್ದು, ಅಂಜಲಿ ಅಲಿಯಾಸ್ ಪ್ರಿಯಾ ಸಿಂಗ್ ಬಂಧಿತ ಆರೋಪಿ. ಉತ್ತರ ಪ್ರದೇಶದ ಬನಾರಸ್ ಜಿಲ್ಲೆಯ ಸಕುಲ್ಪುರದ ಅಂಜಲಿ, ಪತಿಯಿಂದ ದೂರಾಗಿದ್ದಳು. ಆಕೆಗೆ ಓರ್ವ ಮಗಳಿದ್ದಳು. ಪತಿಯಿಂದ ದೂರಾಗಿ ಅಜ್ಮೀರ್ ನ ದತನಗರದ ಆಕ್ಲೇಶ್ ಗುಪ್ತಾ ಎಂಬ ವ್ಯಕ್ತಿಯೊಂದಿಗೆ ಲಿವ್-ಇನ್ ಸಂಬಂಧದಲ್ಲಿ ಇದ್ದಳು.
ಮಗುವನ್ನು ಸರೋವರಕ್ಕೆ ಎಸೆದ ಬಳಿಕ ಅಂಜಲಿ ಹಾಗೂ ಅಕ್ಲೇಶ್ ಕ್ರಿಶ್ಚಿಯನ್ ಠಾಣೆ ಪ್ರದೇಶದಲ್ಲಿ ಮುಂಜಾನೆ 4 ಗಂಟೆ ಸುಮಾರಿಗೆ ಓಡಾಡುತ್ತಿದ್ದರು. ಈ ವೇಳೆ ಪೊಲೀಸರಿಗೆ ಅನುಮಾನ ವ್ಯಕ್ತವಾಗಿ ಪ್ರಶ್ನಿಸಿದಾಗ ಅಂಜಲಿ ತನ್ನ ಮಗು ಕಾಣುತ್ತಿಲ್ಲ. ಹಾಗಾಗಿ ಹುಡುಕಾಡುತ್ತಿದ್ದೇವೆ ಎಂದಿದ್ದಳು.
ಸಿಸಿಟಿವಿ ದೃಶ್ಯ ಪರಿಶೀಲಿಸಿದ ಪೊಲೀಸರಿಗೆ ಅಂಜಲಿ ಅನಾ ಸರೋವರದತ್ತ ಮಗುವಿನ ಜೊತೆ ತೆರಳಿರುವುದು, ಅಲ್ಲಿರುವ ಕಲ್ಲು ಬೆಂಚಿನ ಮೇಲೆ ಮಗುವನ್ನು ಮಲಗಿಸಿರುವ ದೃಶ್ಯ ಪತ್ತೆಯಾಗಿದೆ. ಅಂಜಲಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಿದ್ರಿಸುತ್ತಿದ್ದ ಮಗುವನ್ನು ತಾನೇ ಸರೋವರಕ್ಕೆ ಎಸೆದಿದ್ದಾಗಿ ಒಪ್ಪಿಕೊಂಡಿದ್ದಾಳೆ. ಸರೋವರದಲ್ಲಿ ಶೋಧ ನಡೆಸಿದಾಗ ಮಗುವಿನ ಶವ ಪತ್ತೆಯಾಗಿದೆ. ಸದ್ಯ ಅಂಜಲಿ ಹಾಗೂ ಆಕೆಯ ಗೆಳೆಯನನ್ನು ಬಂಧಿಸಲಾಗಿದೆ. ಅಂಜಲಿ ಪತಿ ಬನಾರಸ್ ಠಾಣೆಯಲ್ಲಿ ಪತ್ನಿ ನಾಪತ್ತೆ ದೂರು ಕೂಡ ದಾಖಲಿಸಿರುವುದು ಬೆಳಕಿಗೆ ಬಂದಿದೆ.