ಭೋಪಾಲ್: ಮಾಟ-ಮಂತ್ರದ ಶಂಕೆಯಿಂದ ಮಗನೊಬ್ಬ ಹೆತ್ತ ತಾಯಿಯನ್ನೇ ಕೊಲೆಗೈದು ಹೊಲದಲ್ಲಿ ಹೂತು ಹಾಕಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯ ಕುಟೇಲಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತಾಯಿ ಮಾಟ-ಮಂತ್ರ ಮಾಡುತ್ತಿದ್ದಾಳೆ ಎಂದು ಅನುಮಾನಗೊಂಡಿದ್ದ ಮಗ ಆಕೆಯನ್ನು ಬರ್ಬರವಾಗಿ ಹತ್ಯೆಗೈದು ಬಳಿಕ ಶವವನ್ನು ಹೊಲದಲ್ಲಿ ಹೂತು ಹಾಕಿದ್ದಾನೆ.
ಸತ್ಯೇಂದ್ರ ಸಿಂಗ್ (25) ತಾಯಿಯನ್ನೇ ಕೊಲೆಗೈದ ಆರೋಪಿ. ಚಿಕ್ಕಪ್ಪನ ಸಾವಿಗೆ ಹಾಗೂ ಕುಟುಂಬದಲ್ಲಿ ಮಕ್ಕಳ ಅನಾರೋಗ್ಯಕ್ಕೆ ತನ್ನ ತಾಯಿಯೇ ಕಾರಣ ಎಂದು ಅನುಮಾನಗೊಂಡಿದ್ದ. ತನ್ನ ಸಂಬಂಧಿ ಜೊತೆಗೂಡಿ ತನ್ನ ತಾಯಿ ಮೇಲೆ ಕೊಡಲಿ ಹಾಗೂ ಕೋಲುಗಳಿಂದ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಹಲ್ಲೆಗೊಳಗಾದ ತಾಯಿ ಉಸಿರಾಡುವುದು ನಿಲ್ಲಿಸುತ್ತಿದ್ದಂತೆ ಕತ್ತು ಹಿಸುಕಿದ್ದಾನೆ. ತಾಯಿ ಮೃತಪಟ್ಟಿದ್ದು ದೃಢವಾಗುತ್ತಿದ್ದಂತೆ ಶವವನ್ನು ಹೊಲಕ್ಕೆ ಎಳೆದೊಯ್ದು ಹೂತುಹಾಕಿದ್ದಾನೆ.
ಅನುಮಾನಗೊಂಡ ಪೊಲೀಸರು ಹೊಲದಲ್ಲಿದ್ದ ಶವ ಹೊರತೆಗೆದಾಗ ಕೊಲೆ ರಹಸ್ಯ ಬಯಲಾಗಿದೆ. ತಾಯಿ ವಾಮಾಚಾರ ನಡೆಸುತ್ತಿದ್ದಾಳೆ ಎಂಬ ಅನುಮಾನಕ್ಕೆ ಆಕೆಯನ್ನು ಕೊಲೆಗೈದಿದ್ದಾನೆ.
