ಹೊಸಪೇಟೆ: ವಿಜಯನಗರ ಜಿಲ್ಲೆ ಹೊಸಪೇಟೆಯ ಸರ್ಕಾರಿ ತಾಯಿ ಮಗು ಆಸ್ಪತ್ರೆಯಲ್ಲಿ ಬಾಣಂತಿ ಮೃತಪಟ್ಟಿದ್ದು, ಅವರ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಹಗರಿಬೊಮ್ಮನಹಳ್ಳಿ ತಾಲೂಕು ದಶಮಾಪುರ ಗ್ರಾಮದ ಶಾಂತಾ(20) ಮೃತಪಟ್ಟ ಬಾಣಂತಿ. ಭಾನುವಾರ ಸಿಜೇರಿಯನ್ ಹೆರಿಗೆ ಮೂಲಕ ಶಾಂತಾ ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ನಂತರ ವೈದ್ಯರು ಸರಿಯಾಗಿ ನಿಗಾವಹಿಸದ ಕಾರಣ ಶಾಂತ ಸಾವನ್ನಪ್ಪಿರುವ ಸಾಧ್ಯತೆ ಇದೆ. ಇದರ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.
ಹೆರಿಗೆ ಮಾಡಿದ ಗುತ್ತಿಗೆ ವೈದ್ಯೆ ಡಾ. ಸಿಂಧೂ ಶಾ ಮತ್ತು ಗುತ್ತಿಗೆ ಶುಷ್ರೂಷಕ ರಘುನಾಥ್ ಅವರನ್ನು ಕರ್ತವ್ಯ ಲೋಪದ ಆರೋಪದ ಮೇಲೆ ವಜಾಗೊಳಿಸಲಾಗಿದೆ. ಶಾಂತಾ ಅವರಿಗೆ ಬೇರೆ ಏನಾದರೂ ಕಾಯಿಲೆ ಇತ್ತೆ ಎಂಬುದನ್ನು ಪತ್ತೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಲ್.ಆರ್. ಶಂಕರ್ ನಾಯ್ಕ್ ತಿಳಿಸಿದ್ದಾರೆ.