ಮುಂಬೈ: ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಆರ್.ಎಸ್.ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಸಿಲುಕಿಸುವ ನಿಟ್ಟಿನಲ್ಲಿ ಷಡ್ಯಂತ್ರ ನಡೆದಿತ್ತು ಎಂದು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್) ಮಾಜಿ ಅಧಿಕಾರಿ ಮೆಹಿಬೂಬ್ ಮುಜಾವರ್ ತಿಳಿಸಿದ್ದಾರೆ.
ಮಾಲೆಗಾಂವ್ ನಲ್ಲಿ 2008ರ ಸೆ.29ರಂದು ನಡೆದ ಸ್ಫೋಟಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದೆ ಪ್ರಜ್ಞಾಸಿಂಗ್ ಠಾಕೂರ್, ಕರ್ನಲ್ ಪ್ರಸಾದ್ ಪುರೋಹಿತ್ ಸೇರಿದಂತೆ ಏಳು ಆರೋಪಿಗಳನ್ನು ಎನ್ ಐಎ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಈ ಘಟನೆ ಹಿಂದೆ ಕೇಸರಿ ಭಯೋತ್ಪಾದನೆ ಇತ್ತು ಎಂಬುದನ್ನು ಸಾಬೀತುಪಡಿಸುವ ಉದ್ದೇಶವಿತ್ತು. ಸುಳ್ಳು ಕಥೆಗಳನ್ನು ಎಟಿಎಸ್ ಹೆಣೆದಿದೆ ಎಂದು ನ್ಯಾಯಾಲಯ ಹೇಳಿದೆ ಎಂದಿದ್ದಾರೆ.
ಆರಂಭದಲ್ಲಿ ಎಟಿಎಸ್ ಪ್ರಕರಣದ ತನಿಖೆ ನಡೆಸುತ್ತಿತ್ತು. ಬಳಿಕ ಎನ್ ಐಎ ತನಿಖೆ ಆರಂಭಿಸಿತು. ನಕಲಿ ತನಿಖೆಯನ್ನು ನಕಲಿ ಅಧಿಕಾರಿಗಳೊಬ್ಬರು ನಡೆಸಿದ್ದಾರೆ ಎಂದು ಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ. ನಾನೂ ಕೂಡ ಈ ಪ್ರಕರಣದ ತನಿಖಾ ತಂಡದಲ್ಲಿ ಇದ್ದೆ. ಹೋಗಿ ಮೋಹನ್ ಭಾಗವತ್ ಅವರನ್ನು ಬಂಧಿಸಿ ಕರೆತನ್ನಿ ಎಂದು ಮೇಲಿನಿಂದ ಆದೇಶ ಬಂತು. ಎಟಿಎಸ್ ಯಾವ ರೀತಿ ತನಿಖೆ ನಡೆಸಿತು. ಹಾಗೂ ಯಾಕೆ ಎಂಬುದನ್ನು ನಾನು ಹೇಲಲಾರೆ. ಆದರೆ ರಾಮ್ ಕಾಲಸಂಗ್ರ, ಸಂದೀಪ್ ದಾಂಗೆ, ದಿಲೀಪ್ ಪಾಟೀದಾರ್ ಹಾಗೂ ಮೋಹನ್ ಭಾಗವತ್ ಅವರನ್ನು ಬಂಧಿಸಲು ಆದೇಶಿಸಲಾಗಿತ್ತು. ಇವು ಪಾಲಿಸಲು ಸಾಅಧ್ಯವಿಲ್ಲದ ಆದೇಶವಾಗಿತ್ತು. ಭಾಗವತ್ ಅವರನ್ನು ಬಂಧಿಸಿ ಕರೆತರುವುದು ನನ್ನ ಸಾಮರ್ಥ್ಯಕ್ಕೂ ಮೀರಿದ್ದಾಗಿತ್ತು. ನಾನು ಆ ಆದೇಶವನ್ನು ಪಾಲಿಸಲಿಲ್ಲ ಎಂದಿದ್ದಾರೆ.
ಇದೇ ಕಾರಣಕ್ಕೆ ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಾಯಿತು. ನನ್ನ 40 ವರ್ಷದ ವೃತ್ತಿ ಬದುಕನ್ನೇ ನಾಶಮಾಡಿದರು. ಹಿಂದೂ ಭಯೋತ್ಪಾದನೆ ಎಂಬುದು ಇರಲೇ ಇಲ್ಲ, ಅದೆಲ್ಲವೂ ಸುಳ್ಳು ಎಂದು ತಿಳಿಸಿದ್ದಾರೆ.