ಶಿಕ್ಷಣ ಇಲಾಖೆ ಸಿಬ್ಬಂದಿಗೆ ಮೊಬೈಲ್ ಆಧಾರಿತ ಹಾಜರಾತಿ ವ್ಯವಸ್ಥೆ ಕಡ್ಡಾಯ ಜಾರಿ: ನೋಂದಣಿ ಆಗದಿದ್ದರೆ ವೇತನ ಸ್ಥಗಿತ, ಶಿಸ್ತುಕ್ರಮದ ಎಚ್ಚರಿಕೆ

ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಮೊಬೈಲ್ ಆಧಾರಿತ ಹಾಜರಾತಿ ವ್ಯವಸ್ಥೆ ಜಾರಿಗೊಳಿಸಲಾಗಿದೆ.

ಇದಕ್ಕೆ ನೋಂದಣಿ ಮಾಡಿಕೊಳ್ಳದ ಅಧಿಕಾರಿಗಳು, ಸಿಬ್ಬಂದಿ ವೇತನವನ್ನು ಸ್ಥಗಿತಗೊಳಿಸುವ ಜೊತೆಗೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

ಶಿಕ್ಷಣ ಇಲಾಖೆ ವ್ಯಾಪ್ತಿಯ ಕಚೇರಿಗಳು, ಉಪ ನಿರ್ದೇಶಕರ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ಅಧೀನ ಕಚೇರಿಗಳಲ್ಲಿಯೂ ಈ ವ್ಯವಸ್ಥೆ ಅಳವಡಿಸಿಕೊಳ್ಳಲು ಸೂಚನೆ ನೀಡಲಾಗಿದೆ. ಹೊಸ ಹಾಜರಾತಿ ವ್ಯವಸ್ಥೆ ಅನುಷ್ಠಾನ ಮಾಡಿದ ಬಗ್ಗೆ ವರದಿ ಸಲ್ಲಿಸುವಂತೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಆಯುಕ್ತರ ಕಛೇರಿಯ ಅಧಿಕಾರಿ/ಸಿಬ್ಬಂದಿಗಳ ದೈನಂದಿನ ಹಾಜರಾತಿ ಮತ್ತು ಸಮಯಪಾಲನೆ ಕುರಿತಂತೆ ಈವರೆವಿಗೂ ಬಯೋಮೆಟ್ರಿಕ್ ಹಾರ್ಡ್‌ ವೇರ್ ವ್ಯವಸ್ಥೆಯ ಮುಖಾಂತರದಲ್ಲಿ ನಿರ್ವಹಣೆ ಮಾಡಲಾಗುತ್ತಿತ್ತು. ಇದೀಗ ಕರ್ನಾಟಕ ಸರ್ಕಾರದ ವತಿಯಿಂದ ಕರ್ನಾಟಕ ಆಧುನಿಕ ಹಾಜರಾತಿ ನಿರ್ವಹಣಾ ವ್ಯವಸ್ಥೆಯು (KAMS) ಅಭಿವೃದ್ಧಿಗೊಂಡಿದೆ. ಕಛೇರಿಯ ಹಾಜರಾತಿ ವ್ಯವಸ್ಥೆಯನ್ನು ಈ ಮುಖಾಂತರವಾಗಿ ನಿರ್ವಹಿಸುವುದರಿಂದ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಏಕರೂಪವಾದ ಹಾಜರಾತಿ ನಿರ್ವಹಣಾ ವ್ಯವಸ್ಥೆಯು ಅಳವಡಿಕೆಯಾಗಲಿದೆ. ಇದರಿಂದ ಕಛೇರಿ ಹಾಜರಾತಿಯಲ್ಲಿ ಪರಿಣಾಮಕಾರಿಯಾದ ನಿರ್ವಹಣೆ ಮತ್ತು ಮೇಲುಸ್ತುವಾರಿ ಕ್ರಮಗಳು ಆಗಲಿವೆ.

ಪ್ರಸ್ತುತದಲ್ಲಿ ಇರುವ ಬಯೋಮೆಟ್ರಿಕ್ ವ್ಯವಸ್ಥೆಯಲ್ಲಿ ಯಂತ್ರೋಪಕರಣದ ಕಾಲಿಕ ನಿರ್ವಹಣೆ ಮತ್ತು ವರದಿಗಳ ಭೌತಿಕ ನಿರ್ವಹಣೆ ಆಗಬೇಕಾಗಿದೆ. ಆದರೆ KAMS ವ್ಯವಸ್ಥೆಯಲ್ಲಿ ಯಾಂತ್ರಿಕವಾಗಿ ಸಂಪೂರ್ಣವಾಗಿ ಹಾಜರಾತಿ ವ್ಯವಸ್ಥೆಯು ನಿರ್ವಹಣೆಯಾಗುವುದರಿಂದ ಇದು ಅತ್ಯಂತ ಪರಿಣಾಮಕಾರಿ ವ್ಯವಸ್ಥೆಯಾಗಲಿದೆ.

ಪ್ರಯುಕ್ತ ಈಗಾಗಲೇ ಆಯುಕ್ತರ ಕಛೇರಿಯ ವಾಟ್ಸ್ಆಪ್ ಗುಂಪಿನಲ್ಲಿ KAMS ವ್ಯವಸ್ಥೆಗೆ ಕಡ್ಡಾಯವಾಗಿ ಪ್ರತಿ ಅಧಿಕಾರಿ/ಸಿಬ್ಬಂದಿಗಳು ನೋಂದಾಯಿಸಿಕೊಂಡು ಹಾಜರಾತಿ ನಿರ್ವಹಣೆಗೆ ಕೈಜೋಡಿಸಲು ಲಿಂಕ್‌ನ್ನು ಹಂಚಿಕೊಳ್ಳಲಾಗಿದೆ. ಈ ಜ್ಞಾಪನದ ಜೊತೆಯಲ್ಲಿಯೂ KAMS ಕುರಿತಾದ ಆಂಗ್ಲ ಮತ್ತು ಕನ್ನಡ ಅವತರಣಿಕೆಯಲ್ಲಿ ಬಳಕೆದಾರರ ಕೈಪಿಡಿಯನ್ನು ಮತ್ತು ಲಿಂಕ್‌ನ್ನು ಮತ್ತೊಮ್ಮೆ ಅನುಬಂಧಿಸಿದೆ.

ಡಿಸೆಂಬರ್ 01 2025ರಿಂದ KAMS ಹಾಜರಾತಿ ವ್ಯವಸ್ಥೆಯು ಕಡ್ಡಾಯವಾಗಿ ಜಾರಿಗೆ ಬರಲಿದ್ದು ನಂತರದಲ್ಲಿ ಬಯೋಮೆಟ್ರಿಕ್ ಹಾಜರಾತಿ ನಿರ್ವಹಣೆ ವ್ಯವಸ್ಥೆ ಇರುವುದಿಲ್ಲ. ಮತ್ತು ಯಾವ ಅಧಿಕಾರಿ/ಸಿಬ್ಬಂದಿಗಳು KAMS ನಲ್ಲಿ ಸೂಕ್ತವಾಗಿ ನೋಂದಾಯಿಸಿಕೊಂಡು ಬಳಕೆ ಮಾಡುವುದಿಲ್ಲವೋ ಅಂತಹ ಅಧಿಕಾರಿ ಸಿಬ್ಬಂದಿಗಳ ವೇತನವನ್ನು ಸ್ಥಗಿತಗೊಳಿಸಲಾಗುವುದು ಮತ್ತು ನಡತೆ ನಿಯಮದ ಉಲ್ಲಂಘನೆ ಎಂಬುದಾಗಿ ಭಾವಿಸಿ ನಿಯಮಾನುಸಾರ ಈ ಕಛೇರಿ ಜ್ಞಾಪನ ಸಂಖ್ಯೆ:ಸಿ5(9).ಬ.ಮೆ.ಹಾ/46/2020-21, ದಿನಾಂಕ:01.12.2022 ರನ್ವಯ ಏಕಪಕ್ಷೀಯವಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂಬುದಾಗಿ ಕಟ್ಟುನಿಟ್ಟಾಗಿ ಸೂಚಿಸಿದೆ.

ಶಾಲಾ ಶಿಕ್ಷಣ ಇಲಾಖೆಯ ಆಯುಕ್ತಾಲಯ ವ್ಯಾಪ್ತಿಯ ರಾಜ್ಯ ಕೇಂದ್ರ ಕಛೇರಿಗಳು, ಉಪ ನಿರ್ದೇಶಕರ ಕಛೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಾಗೂ ಇತರೆ ಅಧೀನ ಕಛೇರಿಗಳಲ್ಲಿಯೂ ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಮತ್ತು ಅಳವಡಿಸಿಕೊಂಡಿರುವ ಬಗ್ಗೆ ಸಹ ನಿರ್ದೇಶಕರು ಬೆಂಗಳೂರು/ಮೈಸೂರು ರವರ ಮುಖಾಂತರದಲ್ಲಿ ವರದಿಯನ್ನು ಸಲ್ಲಿಸಲು ಆಯಾ ಕಛೇರಿ ಮುಖ್ಯಸ್ಥರಿಗೆ ಸೂಚಿಸಿದೆ. ಬೆಂಗಳೂರು ಮತ್ತು ಮೈಸೂರು ವಿಭಾಗೀಯ ಸಹ ನಿರ್ದೇಶಕರು ಈ ಬಗ್ಗೆ ಮೇಲುಸ್ತುವಾರಿಯನ್ನು ವಹಿಸಿ ಕ್ರೋಢೀಕೃತ ವರದಿಯನ್ನು ಜರೂರಾಗಿ ಸಲ್ಲಿಸತಕ್ಕದ್ದು.

ಹಾಜರಾತಿ ನಿರ್ವಹಣೆ ಸಂಬಂಧ KAMS ತಂತ್ರಾಂಶದಲ್ಲಿ ಉದ್ಭವಿಸುವ ತಾಂತ್ರಿಕ ಸಮಸ್ಯೆಗಳಿಗೆ, KAMS ತಾಂತ್ರಿಕ ನೋಡಲ್ ಅಧಿಕಾರಿಯವರಾದ ಬೈಯಪ್ಪರೆಡ್ಡಿ, ಹಿರಿಯ ಸಹಾಯಕ ನಿರ್ದೇಶಕ ಸ-ಆಡಳಿತ (ದೂರವಾಣಿ ಸಂಖ್ಯೆ:8861500980), ಆಯುಕ್ತರ ಕಛೇರಿ, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರ ಇವರನ್ನು ಸಂಪರ್ಕಿಸುವುದು.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read