ಸೋನ್ ಭದ್ರ(ಉತ್ತರ ಪ್ರದೇಶ): ಮಾಟಮಂತ್ರದ ಶಂಕೆಯಿಂದ ಗ್ರಾಮಸ್ಥರು ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿ 52 ವರ್ಷದ ಮಹಿಳೆಯನ್ನು ಕೊಂದು, ಆಕೆಯ ಪತಿಯನ್ನು ಗಂಭೀರವಾಗಿ ಗಾಯಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಓಬ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಪಾರ್ಸೋಯಿ ಗ್ರಾಮದಲ್ಲಿ ಗುರುವಾರ ತಡರಾತ್ರಿ ಈ ಘಟನೆ ನಡೆದಿದೆ. 57 ವರ್ಷದ ಬಾಬೂಲಾಲ್ ಖಾರ್ವಾರ್ ಮತ್ತು ಅವರ ಪತ್ನಿ ರಾಜವಂತಿ ಮನೆಯಲ್ಲಿದ್ದಾಗ, ಗುಲಾಬ್ ಎಂಬ ಗ್ರಾಮಸ್ಥ ಇನ್ನೂ ಹಲವರೊಂದಿಗೆ ಒಳಗೆ ನುಗ್ಗಿ ದಂಪತಿಗಳು ಮಾಟಮಂತ್ರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸ್ಟೇಷನ್ ಹೌಸ್ ಆಫೀಸರ್(ಎಸ್‌ಹೆಚ್‌ಒ) ರಾಜೇಶ್ ಸಿಂಗ್ ತಿಳಿಸಿದ್ದಾರೆ.
ರಾಜವಂತಿ ಸ್ಥಳದಲ್ಲೇ ಸಾವನ್ನಪ್ಪಿದರೆ, ಬಾಬೂಲಾಲ್ ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಹತ್ಯೆಗೆ ಸಂಬಂಧಿಸಿದಂತೆ ಗುಲಾಬ್ ನನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ(ಎಎಸ್‌ಪಿ) ಅನಿಲ್ ಕುಮಾರ್ ತಿಳಿಸಿದ್ದಾರೆ.