ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಇಳಕಲ್ ಹೊರ ವಲಯದ ಚಿಕ್ಕಕೊಡಗಲಿ ರಸ್ತೆಯ ಬಳಿ ಭಾನುವಾರ ಡಾ. ಅಂಬೇಡ್ಕರ್ ವಸತಿ ಶಾಲೆ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಭೂಮಿಪೂಜೆಗೆ ಬಂದಿದ್ದ ಶಾಸಕ ವಿಜಯಾನಂದ ಕಾಶಪ್ಪನವರ್ ನಿರಾಕರಿಸಿದ ಘಟನೆ ನಡೆದಿದೆ.
ಕುಡಿಯುವ ನೀರು, ಒಳಚರಂಡಿ ಸೇರಿದಂತೆ ಮೂಲ ಸೌರ್ಕರ್ಯಗಳೇ ಇಲ್ಲದ ಸ್ಥಳದಲ್ಲಿ 17 ಕೋಟಿ ರೂಪಾಯಿ ವೆಚ್ಚದಲ್ಲಿ ಡಾ. ಅಂಬೇಡ್ಕರ್ ವಸತಿ ಶಾಲೆ ನಿರ್ಮಾಣ ಸಾಧ್ಯವಿಲ್ಲ ಎಂದು ಭೂಮಿ ಪೂಜೆ ಮಾಡಲು ಶಾಸಕರು ನಿರಾಕರಿಸಿದ್ದಾರೆ.
ಅಧಿಕಾರಿಗಳು ಭಾನುವಾರ ವಸತಿ ಶಾಲೆ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಂಡಿದ್ದು, ಭೂಮಿ ಪೂಜೆಗೆ ಶಾಸಕರನ್ನು ಆಹ್ವಾನಿಸಿದ್ದರು. ಸ್ಥಳಕ್ಕೆ ಆಗಮಿಸಿದ ಶಾಸಕ ವಿಜಯಾನಂದ ಕಾಶಪ್ಪನವರ್ ಸುತ್ತಮುತ್ತಲಿನ ಜಾಗವನ್ನು ವೀಕ್ಷಿಸಿ ಅಡವಿಯಂತಿರುವ ಈ ಜಾಗದಲ್ಲಿ ಶಾಲೆ ನಿರ್ಮಾಣ ಹೇಗೆ ಸಾಧ್ಯ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನಮ್ಮ ಮಕ್ಕಳಾದರೂ ಅಷ್ಟೇ, ಬೇರೆಯವರ ಮಕ್ಕಳಾದರೂ ಅಷ್ಟೇ. ಸ್ಮಶಾನದ ಪಕ್ಕದಲ್ಲಿರುವ ಈ ಸ್ಥಳದಲ್ಲಿ ವಸತಿ ಶಾಲೆ ನಿರ್ಮಾಣ ಮಾಡಲು ನನ್ನ ಮನಸ್ಸು ಒಪ್ಪುವುದಿಲ್ಲ, ಸಾರ್ವಜನಿಕರು ಕೂಡ ಒಪ್ಪುವುದಿಲ್ಲ. ಸರ್ಕಾರದ ಹಣ ಇದೆ ಎನ್ನುವ ಕಾರಣಕ್ಕೆ ಎಲ್ಲಿ ಬೇಕೆಂದರಲ್ಲಿ ಶಾಲೆ ನಿರ್ಮಾಣ ಮಾಡಲಾಗದು ಎಂದು ಹೇಳಿದ್ದಾರೆ.
ವಸತಿ ಶಾಲೆ ನಿರ್ಮಾಣಕ್ಕೆ ಬೇರೆ ಸ್ಥಳವನ್ನು ನಿಗದಿಪಡಿಸಿ ಅಲ್ಲಿ ಶಾಲೆ ನಿರ್ಮಿಸಲಾಗುವುದು. ಒಂದು ವರ್ಷದೊಳಗೆ ಕೆಲಸ ಪೂರ್ಣಗೊಳಿಸುವುದಾಗಿ ಹೇಳಿ ಶಾಸಕರು ಭೂಮಿ ಪೂಜೆ ಮಾಡದೇ ತೆರಳಿದ್ದಾರೆ.
