ಮೃತರು ಸೇರಿ ಅನರ್ಹರಿಗೆ ಭೂ ಮಂಜೂರಾತಿ: ಶಾಸಕ ನಂಜೇಗೌಡರ ಅರ್ಜಿ ವಜಾ, ತನಿಖೆಗೆ ಹೈಕೋರ್ಟ್ ಆದೇಶ

ಬೆಂಗಳೂರು: ಕಾಂಗ್ರೆಸ್ ಶಾಸಕ ಕೆ.ವೈ. ನಂಜೇಗೌಡ ಅವರು ಮಾಲೂರು ತಾಲೂಕು ಭೂ ಮಂಜೂರಾತಿ ಸಮಿತಿ ಅಧ್ಯಕ್ಷರಾಗಿದ್ದಾಗ ಅನರ್ಹರಿಗೆ ಭೂ ಮಂಜೂರಾತಿ ಮಾಡಿದ್ದ ಸಂಬಂಧ ದಾಖಲಾಗಿದ್ದ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ್ದು, ತನಿಖೆಗೆ ಆದೇಶ ನೀಡಿದೆ.

ಮಾಲೂರು ತಾಲೂಕು ಭೂ ಮಂಜೂರಾತಿ ಸಮಿತಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ನಂಜೇಗೌಡ ಹಾಗೂ ಇತರರು ಕೋಟ್ಯಂತರ ರೂಪಾಯಿ ಬೆಲೆಬಾಳುವ ಸುಮಾರು 80 ಎಕರೆ ಸರ್ಕಾರಿ ಭೂಮಿಯನ್ನು ಮೃತಪಟ್ಟವರು ಸೇರಿದಂತೆ ಅನರ್ಹರಿಗೆ ಮಂಜೂರು ಮಾಡಿದ್ದರು. ಈ ಸಂಬಂಧ ದಾಖಲಾಗಿದ್ದ ಪ್ರಕರಣ ರದ್ದು ಕೋರಿ ಕಾಂಗ್ರೆಸ್ ಶಾಸಕ ನಂಜೇಗೌಡ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವೈಜಾಗೋಳಿಸಿ ತನಿಖೆಗೆ ಅನುಮತಿ ನೀಡಿದೆ.

ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಸರ್ಕಾರಿ ಭೂಮಿಯನ್ನು ಅರ್ಹರಲ್ಲದವರಿಗೆ ಹಂಚಿಕೆ ಮಾಡುವ ಮೂಲಕ ಜನಪ್ರತಿನಿಧಿಗಳಿಗೆ ನೀಡಿದ ಅಧಿಕಾರವನ್ನು ಅರ್ಜಿದಾರರು ದುರುಪಯೋಗಪಡಿಸಿಕೊಂಡಿದ್ದಾರೆ. ಇಂತಹ ಪ್ರಕರಣಗಳಲ್ಲಿ ಇದು ಉತ್ತಮ ಉದಾಹರಣೆಯಾಗಿದೆ ಎಂದು ನ್ಯಾಯಪೀಠ ಹೇಳಿದ್ದು, ಶಾಸಕರ ಅರ್ಜಿಯನ್ನು ವಜಾಗೊಳಿಸಿದೆ. ಪ್ರಕರಣದ ಸಂಬಂಧ ತನಿಖೆಗಾಗಿ ಈ ಹಿಂದೆ ನೀಡಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿದೆ.

ಆರೋಪ ಸಂಬಂಧ ಈ ಮೊದಲೇ ದಾಖಲಾದ ಎಫ್ಐಆರ್ ನಲ್ಲಿ ಅರ್ಜಿದಾರರು ಆರೋಪಿಗಳಾಗಿಲ್ಲ. ಹಾಗಾಗಿ ಎರಡನೇ ಎಫ್ಐಆರ್ ರದ್ದು ಮಾಡಬೇಕೆಂಬ ಅರ್ಜಿದಾರರ ಮನವಿಯಯನ್ನು ಹೈಕೋರ್ಟ್ ತಳ್ಳಿ ಹಾಕಿದೆ.

ನಂಜೇಗೌಡ ಸೇರಿದಂತೆ ಸಮಿತಿಯ ಇತರೆ ಮೂವರು ಸದಸ್ಯರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಅರ್ಜಿ ವಜಾಗೊಳಿಸಿ ತನಿಖೆಗೆ ಅನುಮತಿ ನೀಡಿದೆ.

2004ರಲ್ಲಿ ಮೃತರಾಗಿದ್ದ ನಾರಾಯಣಪ್ಪ ಎಂಬುವರಿಗೆ 2019ರಲ್ಲಿ 1.39 ಎಕರೆ ಜಮೀನು ಮಂಜೂರು ಮಾಡಲಾಗಿದೆ. 40 ವರ್ಷದ ಆನಂದಗೌಡ ಎನ್ನುವ ವ್ಯಕ್ತಿಗೆ ಕಳೆದ 50 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದ ಕಾರಣ ನೀಡಿ ಜಮೀನು ಮಂಜೂರು ಮಾಡಲಾಗಿದೆ. ಈ ಅಂಶಗಳನ್ನು ಪರಿಗಣಿಸಿದರೆ ಸಮಿತಿಯ ಅಧ್ಯಕ್ಷರಾಗಿದ್ದ ಅರ್ಜಿದಾರರು ಸರ್ಕಾರಿ ಭೂಮಿ ಕಬಳಿಸಿದ್ದಾರೆ ಮತ್ತು ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ನ್ಯಾಯಪೀಠ ಉಲ್ಲೇಖಿಸಿದೆ.

2019ರಲ್ಲಿ ನಂಜೇಗೌಡರು ಶಾಸಕರಾಗಿದ್ದು, ಮಾಲೂರು ತಾಲೂಕು ಭೂ ಮಂಜೂರಾತಿ ಸಮಿತಿ ಅಧ್ಯಕ್ಷರಾಗಿದ್ದರು. ಅವರು ಅನರ್ಹರಿಗೆ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಸರ್ಕಾರಿ ಜಮೀನು ಮಂಜೂರು ಮಾಡಿದ ಆರೋಪ ಕೇಳಿ ಬಂದಿತ್ತು. ಕೋಲಾರ ನಿವಾಸಿ ಸಾಮಾಜಿಕ ಕಾರ್ಯಕರ್ತ ಕೆ.ಸಿ. ರಾಜಣ್ಣ ಮಾಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಎಫ್ಐಆರ್ ದಾಖಲಿಸಲು ನಿರಾಕರಿಸಿದ್ದ ನಂತರ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು.

ನ್ಯಾಯಾಲಯ ನಂಜೇಗೌಡರ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲು ಮಾಲೂರು ಪೊಲೀಸರಿಗೆ ಸೂಚಿಸಿದ್ದು, ಪೊಲೀಸರು ಎಫ್ಐಆರ್ ದಾಖಲಿಸಿದ್ದು, ಇದನ್ನು ಪ್ರಶ್ನಿಸಿ ನಂಜೇಗೌಡ ಮತ್ತಿತರರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅದನ್ನು ಹೈಕೋರ್ಟ್ ವಜಾಗೊಳಿಸಿ ತನಿಖೆಗೆ ಆದೇಶ ನೀಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read