ಕೊಪ್ಪಳ: ಸರ್ಕಾರಿ ಹಣವನ್ನು ದುರುಪಯೋಗ ಪಡಿಸಿಕೊಂಡ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ, ಕೊಪ್ಪಳ ಭಾಗ್ಯನಗರ ಶಾಖೆಯ ಜೂನಿಯರ್ ಅಸಿಸ್ಟೆಂಟ್ ಅಧಿಕಾರಿ ಜಿ.ಮಂಜುನಾಥ ತಂದೆ ಗುಂಡಪ್ಪ ಎಂಬುವವರಿಗೆ ಕೊಪ್ಪಳ ಸಿಜೆಎಂ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ಮಲ್ಕಾರಿ ರಾಮಪ್ಪ ಒಡೆಯರ್ ಅವರು 7 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ.10 ಸಾವಿರಗಳ ದಂಡವನ್ನು ವಿಧಿಸಿ ಸೆ.27 ರಂದು ತೀರ್ಪು ಪ್ರಕಟಿಸಿದ್ದಾರೆ.
2002-03 ನೇ ಸಾಲಿನಲ್ಲಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ, ಕೊಪ್ಪಳ ಭಾಗ್ಯನಗರ ಶಾಖೆಯಲ್ಲಿ ಜೂನಿಯರ್ ಅಸಿಸ್ಟೆಂಟ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹಾಸನ ಜಿಲ್ಲೆಯ ಗೋರೂರಿನ ಜಿ.ಮಂಜುನಾಥ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ರೂ.2,66,100 ಮೌಲ್ಯದ 20 ಬೇಲ್ಸ್ ಗಳ ಪೈಕಿ 4 ಬೇಲ್ಸ್ ಗಳನ್ನು ಮರಳಿ ಒಪ್ಪಿಸಿದ್ದು, ಉಳಿದ 16 ಬೇಲ್ಸ್ ಗಳನ್ನು ಇತರರಿಗೆ ಮಾರಾಟ ಮಾಡಿ, ಅದರಿಂದ ರೂ.2,12,100/- ಗಳನ್ನು ಪಡೆದು ಅದನ್ನು ಸರ್ಕಾರಕ್ಕೆ ಭರಿಸದೇ ಸ್ವಂತಕ್ಕೆ ಬಳಕೆ ಮಾಡಿಕೊಂಡಿದ್ದರು. ಈ ಕುರಿತು ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ: 150/2005 ರಡಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಆಗಿನ ತನಿಖಾಧಿಕಾರಿಯಾಗಿದ್ದ ಪಿಐ ಪಿ.ಶಿವಲಿಂಗರಾಧ್ಯ ಅವರು ಆರೋಪಿಯ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು. ನ್ಯಾಯಾಲಯದ ವಿಚಾರಣೆಯಲ್ಲಿ ಆರೋಪಿಯ ವಿರುದ್ಧದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ನಂಬಿಕೆ ದ್ರೋಹ ಹಾಗೂ ವಂಚನೆ ಮಾಡಿದ ಅಪರಾಧಕ್ಕೆ ಭಾ.ದಂ.ಸಂ. ಕಲಂ 409 ಅಡಿಯಲ್ಲಿನ ಅಪರಾಧಕ್ಕೆ 7 ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ಮತ್ತು ರೂ.10,000/- ಗಳ ದಂಡವನ್ನು ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
ಪ್ರಕರಣದಲ್ಲಿ ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರಾದ ವಸಂತ ಅವರು ವಾದ ಮಂಡಿಸಿದ್ದರು. ಕೊಪ್ಪಳ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಸಿ.ಹೆಚ್.ಸಿ 15 ಲತೀಫ್, ಸಿ.ಹೆಚ್.ಸಿ 183 ಸೂರ್ಯಕಾಂತ, ಪಿಸಿ 156 ಗವಿಸಿದ್ದಪ್ಪ ಹಾಗೂ ಪಿಸಿ 605 ಮಂಜುನಾಥ ಕಡಗತ್ತಿ ಅವರು ಸಮಯಕ್ಕೆ ಸರಿಯಾಗಿ ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರ ಕಾರ್ಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.