ವಾಲ್ಮೀಕಿ ಬೇಡರ ಸಮುದಾಯದ ಕುರಿತು ರಮೇಶ ಕತ್ತಿ ಅವರು ಅವಹೇಳನಕಾರಿ ಹೇಳಿಕೆ ನೀಡಿದ್ದು, ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಆಗ್ರಹಿಸಿದ್ದಾರೆ.
ಬೆಳಗಾವಿಯಲ್ಲಿ ವಾಲ್ಮೀಕಿ ಬೇಡರ ಸಮುದಾಯದ ಕುರಿತು ರಮೇಶ ಕತ್ತಿ ಅವರು ನೀಡಿರುವ ಅವಹೇಳನಕಾರಿ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಮೇಲ್ನೋಟಕ್ಕೆ ಅದು ನಿಜವಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಇಂತಹ ಅಸಂವೇದನಾಶೀಲ ಮಾತುಗಳು ಸಮಾಜದ ಸೌಹಾರ್ದತೆ ಮತ್ತು ಸಂವಿಧಾನಾತ್ಮಕ ಮೌಲ್ಯಗಳಿಗೆ ಗಂಭೀರ ಧಕ್ಕೆ ತರುತ್ತವೆ. ಆದ್ದರಿಂದ, ಕಾನೂನಿನ ಪ್ರಕಾರ ತನಿಖೆಯನ್ನು ಕೈಗೊಂಡು ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಜಾತಿಯಂತಹ ವಿಷವನ್ನು ಬೇರುಸಹಿತ ನಿರ್ಮೂಲನೆಗೊಳಿಸಲು ತಮ್ಮ ಜೀವನವನ್ನೇ ಅರ್ಪಿಸಿದ ಮಹಾನ್ ತತ್ವಜ್ಞಾನಿಗಳು ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ “ಸಮಾನತೆ, ಮಾನವೀಯತೆ ಮತ್ತು ಸಹೋದರತೆ” ಎಂಬ ಸಿದ್ಧಾಂತಗಳೇ ನಮ್ಮ ಮಾರ್ಗ ಮತ್ತು ದಾರಿದೀಪವಾಗಬೇಕು — “ನಾ ಹೆಚ್ಚು, ನೀ ಹೆಚ್ಚು” ಎಂಬ ಜಾತಿಯ ವಿಷವಲ್ಲ ಎಂದು ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.