ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಪ್ರಸಿದ್ಧ ಪ್ರವಾಸಿ ತಾಣ ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರ ರಕ್ಷಣೆಗಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಕಾಶ್ಮೀರಕ್ಕೆ ತೆರಳಿದ್ದಾರೆ.
ಕನ್ನಡಿಗರ ರಕ್ಷಣೆ ಸೇರಿದಂತೆ ಶೀಘ್ರ ಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದು, ಅವರ ಸೂಚನೆ ಮೇರೆಗೆ ಸಂತೋಷ್ ಲಾಡ್ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಶ್ರೀನಗರಕ್ಕೆ ಪ್ರಯಾಣ ಬೆಳೆಸಿದ್ದಾರೆ.
ಅವರು ಕನ್ನಡಿಗರನ್ನು ಸುರಕ್ಷಿತವಾಗಿ ವಾಪಸ್ ಕರೆತರುವ ಕಾರ್ಯ ನಿರ್ವಹಿಸಲಿದ್ದಾರೆ. ಈ ಹಿಂದೆ ಉತ್ತರಾಖಂಡ ಮತ್ತು ವಯನಾಡಿನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾದ ಸಂದರ್ಭದಲ್ಲಿ, ಒಡಿಶಾದಲ್ಲಿ ರೈಲ್ವೆ ದುರಂತ ನಡೆದ ಸಂದರ್ಭದಲ್ಲಿ ಸಂತೋಷ್ ಲಾಡ್ ಕನ್ನಡಿಗರ ರಕ್ಷಣೆಗೆ ಧಾವಿಸಿದ್ದರು. ಈ ಅನುಭವದ ಹಿನ್ನೆಲೆಯಲ್ಲಿ ಅವರನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಕಳುಹಿಸಲಾಗಿದೆ.
ಉಗ್ರರ ದಾಳಿಯ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಸಿಲುಕಿರುವ ರಾಜ್ಯದ ಪ್ರವಾಸಿಗರನ್ನು ಸುರಕ್ಷಿತವಾಗಿ ತರಲು ತುರ್ತು ಸಭೆ ನಡೆಸಿದ್ದಾರೆ. ದೆಹಲಿಯ ಕರ್ನಾಟಕ ಭವನದ ನಿವಾಸಿ ಆಯುಕ್ತ ಮತ್ತು ರಾಜ್ಯದ ಹಿರಿಯ ಅಧಿಕಾರಿಗಳ ತಂಡವನ್ನು ಜಮ್ಮು ಕಾಶ್ಮೀರಕ್ಕೆ ಕಳುಹಿಸಲಾಗಿದೆ.