ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ LKG, UKG ಆರಂಭ, ದಾಖಲಾತಿ ಹೆಚ್ಚಳಕ್ಕೆ ಸಚಿವ ಮಧು ಬಂಗಾರಪ್ಪ ಸೂಚನೆ

ಶಿವಮೊಗ್ಗ: ವಿವಿಧ ಇಲಾಖೆಗಳ ಮೂಲಕ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳನ್ನು ಸಚಿವರ ಉದ್ಘಾಟನೆಗಾಗಿ ತಡಮಾಡದೆ ತ್ವರಿತವಾಗಿ ಆರಂಭಿಸಿ, ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆಗೆ ಸಜ್ಜುಗೊಳಿಸುವಂತೆ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಅವರು ಇಂದು ಸೊರಬದ ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಅನುಕೂಲವಾಗುವಂತೆ ಶಿಕ್ಷಣ ಇಲಾಖೆ ಶೀಘ್ರದಲ್ಲಿ ಅನೇಕ ಮಹತ್ವದ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಮುಂದಾಗಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಲ್.ಕೆ.ಜಿ. ಮತ್ತು ಯು.ಕೆ.ಜಿ ತರಗತಿಗಳನ್ನು ಆರಂಭಿಸಲು ಸೂಚಿಸಲಾಗಿದೆ. ಈ ಶಾಲೆಗಳಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳನ್ನು ಉಚಿತವಾಗಿ ನಡೆಸಲಾಗುವುದು. ವಿಶೇಷವಾಗಿ ಮೂಲಭೂತ ಸೌಕರ್ಯ ಹೊಂದಿರುವ ಶಾಲೆಗಳಲ್ಲಿ ತರಗತಿಗಳ ಆರಂಭಕ್ಕೆ ಆದ್ಯತೆ ನೀಡಲಾಗುವುದು ಎಂದರು.

ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರು ಶಾಲಾ ಫಲಿತಾಂಶ ಸುಧಾರಣೆಗೆ ವಿಶೇಷ ಕಾಳಜಿ ವಹಿಸಬೇಕು. ಯಾವುದೇ ಮಗು ಶಾಲಾ ದಾಖಲಾತಿಯಿಂದ ಹೊರಗುಳಿಯದಂತೆ ಗಮನಿಸಬೇಕು. ಅಲ್ಲದೆ ದಾಖಲಾತಿಯಲ್ಲಿ ಗಣನೀಯ ಪ್ರಮಾಣದ ಏರಿಕೆ ಕಂಡುಬರಬೇಕು ಎಂದು ಸೂಚಿಸಿದರು.

ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಪ್ರತಿಭಾವಂತ ಶಿಕ್ಷಕರಿದ್ದು, ಮಕ್ಕಳು ಅವರಿಂದ ಬೋಧನೆಯ ಲಾಭ ಪಡೆದು, ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಶಾಲಾರಂಭದ ಮೊದಲ ದಿನ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಮಕ್ಕಳನ್ನು ಸ್ವಾಗತಿಸಲು ವಿವಿಧ ಇಲಾಖೆಗಳ ಅಧಿಕಾರಿಗಳು ಸಮೀಪದ ಶಾಲೆಯಲ್ಲಿ ಹಾಜರಿರುವಂತೆ ಸೂಚಿಸಿದ ಅವರು, ಶಿಕ್ಷಕರು ಗುಣಮಟ್ಟದ ಬೋಧನೆಗೆ ಗಮನಹರಿಸುವಂತೆ ಸೂಚಿಸಿದರು.

ಪ್ರಸ್ತುತ ಪ್ರಕಟಿಸಲಾಗಿರುವ ದ್ವಿತೀಯ ಪಿ.ಯು.ಸಿ.ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಲ್ಲಿ ಶೇ.94ರಷ್ಟು ವಿದ್ಯಾರ್ಥಿಗಳು ಪೂರಕ ಪರೀಕ್ಷೆಗೆ ಹಾಜರಾಗಲು ನೋಂದಾಯಿಸಿಕೊಂಡಿದ್ದಾರೆ. ಅಲ್ಲದೇ ರಾಜ್ಯದಲ್ಲಿ ಉತ್ತೀರ್ಣರಾದ ಸುಮಾರು 70,000ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳಿಕೆಯ ಕಾರಣದಿಂದ ಪರೀಕ್ಷೆ ಬರೆಯುತ್ತಿರುವುದು ವಿಶೇಷವಾಗಿದೆ. ವಿದ್ಯಾರ್ಥಿಗಳು ಬರೆಯುವ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಪಡೆದಿರುವುದನ್ನು ನಮೂದಿಸಿ, ಪ್ರಮಾಣಪತ್ರ ವಿತರಿಸಲು ಕ್ರಮವಹಿಸಲಾಗುವುದು ಎಂದರು.

ಬಿಸಿಯೂಟ ತಯಾರಿಕೆಯಲ್ಲಿ ಅಲ್ಯುಮಿನಿಯಮ್‌ ಪಾತ್ರೆಗಳ ಬಳಕೆ ಮಾಡುತ್ತಿರುವುದನ್ನು ಗಮನಿಸಲಾಗಿದೆ. ಅಲ್ಯುಮಿನಿಯಂ ಪಾತ್ರೆಗಳ ಬಳಕೆ ಆರೋಗ್ಯದ ದೃಷ್ಟಿಯಿಂದ ಉತ್ತಮವಲ್ಲ ಎಂಬ ಕಾರಣಕ್ಕೆ ಅಲ್ಯುಮಿನಿಯಮ್‌ಗೆ ಪರ್ಯಾಯವಾಗಿ ರಾಜ್ಯದ ಸುಮಾರು 65000 ಸರ್ಕಾರಿ ಶಾಲೆಗಳಿಗೆ ಗುಣಮಟ್ಟದ ಪಾತ್ರೆಗಳನ್ನು ಒದಗಿಸಲು ಉದ್ದೇಶಿಸಲಾಗಿದೆ. ನೆಲದ ಮೇಲೆ ಕುಳಿತುಕೊಳ್ಳುವ ಶಾಲೆಗಳಿಗೆ ಬೆಂಚ್‌ಗಳನ್ನು ಪೂರೈಸಲು ಉದ್ದೇಶಿಸಲಾಗಿದ್ದು, ಅಂತಹ ಶಾಲೆಗಳ ಯಾದಿಯನ್ನು ಸಲ್ಲಿಸುವಂತೆ ಸೂಚಿಸಿದ ಅವರು, ಶಿಥಿಲಗೊಂಡಿರುವ ಅಡುಗೆ ಕೋಣೆಗಳ ದುರಸ್ತಿ ಹಾಗೂ ನೂತನ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read