ರಾಯಚೂರು: ಅವೈಜ್ಞಾನಿಕ ಟೋಲ್ ಗೇಟ್ ಗಳನ್ನು ನಿರ್ಮಿಸಿ ಜನರಿಂದ ಶುಲ್ಕ ಸಂಗ್ರಹಿಸುತ್ತಿರುವುದನ್ನು ವಿರೋಧಿಸಿ ಧರಣಿ ನಡೆಸುತ್ತಿದ್ದ ಶಾಸಕಿ ಕರೆಮ್ಮ ನಾಯಕ ತಾತ್ಕಾಲಿಕವಾಗಿ ಧರಣಿಯನ್ನು ಅಂತ್ಯಗೊಳಿಸಿದ್ದಾರೆ.
ಬೆಂಗಳೂರಿನಲ್ಲಿ ಲೋಕೋಪಯೋಗಿ ಇಲಾಖೆ ಸಚಿವರ ಸಭೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಧರಣಿ ಕೈಬಿಟ್ಟಿದ್ದಾರೆ.
ತಿಂಥಣಿ ಬ್ರಿಜ್ -ರಾಯಚೂರು ರಸ್ತೆ ಮಾರ್ಗದಲ್ಲಿ ಕಾಕರಗಲ್ ಬಳಿ ನಿರ್ಮಿಸಿರುವ ಟೋಲ್ ಗೇಟ್ ಬಳಿ ಶುಕ್ರವಾರದಿಂದ ಕರೆಮ್ಮ ನಾಯಕ ಅಹೋರಾತ್ರಿ ಧರಣಿ ನಡೆಸಿದ್ದರು. 40 ಕಿ.ಮೀ. ವ್ಯಾಪ್ತಿಯೊಳಗೆ ಅವೈಜ್ಞಾನಿಕವಾಗಿ ಟೋಲ್ ಸಂಗ್ರಹಿಸಲಾಗುತ್ತಿದೆ ಎಂದು ಆರೋಪಿಸಿದ್ದರು.
ಜಿಲ್ಲಾಧಿಕಾರಿ ನಿತೀಶ್ ಅವರು ಶಾಸಕರೊಂದಿಗೆ ಫೋನ್ ನಲ್ಲಿ ಮಾತನಾಡಿ, ಜುಲೈ 24ರಂದು ಬೆಂಗಳೂರಿನಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸಭೆ ಕರೆದಿದ್ದಾರೆ. ಬೆಂಗಳೂರಿನ ವಿಕಾಸಸೌಧದಲ್ಲಿ ಸಭೆ ಕರೆದಿದ್ದು, ಈ ಬಗ್ಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕರೆಮ್ಮ ನಾಯಕ ತಾತ್ಕಾಲಿಕವಾಗಿ ಧರಣಿಯನ್ನು ಕೈಬಿಟ್ಟಿದ್ದಾರೆ.