ಸರ್ಕಾರಿ ಶಾಲೆಯ ಅಧ್ಯಾಪಕಿ ನಿದ್ರೆಗೆ ಜಾರಿದ ವಿಡಿಯೊ ವೈರಲ್….. ! ನೆಟ್ಟಿಗರ ಕಳವಳ | Watch

ಉತ್ತರ ಪ್ರದೇಶದ ಮೀರತ್‌ನ ಶಾಲೆಯೊಂದರಲ್ಲಿ ಶಿಕ್ಷಕಿಯೊಬ್ಬರು ತರಗತಿಯ ಸಮಯದಲ್ಲಿ ಕುರ್ಚಿಯ ಮೇಲೆ ಮಲಗಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಪರ ಮತ್ತು ವಿರೋಧದ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಶಿಕ್ಷಕಿಯ ಈ ವರ್ತನೆಯನ್ನು ಬೇಜವಾಬ್ದಾರಿ ಎಂದು ಟೀಕಿಸಿದರೆ, ಇನ್ನು ಕೆಲವರು ಆಕೆಯ ಆರೋಗ್ಯ ಮತ್ತು ಕಾರ್ಯ ಒತ್ತಡದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ವಿಡಿಯೊದಲ್ಲಿ ಮಧ್ಯವಯಸ್ಕ ಶಿಕ್ಷಕಿಯೊಬ್ಬರು ತರಗತಿಯ ಕೋಣೆಯಲ್ಲಿ ಗಾಢ ನಿದ್ರೆಯಲ್ಲಿರುವುದು ಕಾಣಿಸುತ್ತದೆ. ಈ ದೃಶ್ಯವನ್ನು ವಿದ್ಯಾರ್ಥಿಯೊಬ್ಬ ಸೆರೆಹಿಡಿದಿದ್ದಾನೆ. ಇಂಡಿಯಾ ಟುಡೇ ವರದಿಯ ಪ್ರಕಾರ, ಮೀರತ್‌ನ ಕೃಷ್ಣಾಪುರಿಯ ಜೂನಿಯರ್ ಹೈಸ್ಕೂಲ್‌ನಲ್ಲಿ ಈ ಘಟನೆ ನಡೆದಿದ್ದು, ಸಹಾಯಕ ಶಿಕ್ಷಕಿಯನ್ನು ಈಗ ವಿಚಾರಣೆಗೆ ಒಳಪಡಿಸಲಾಗಿದೆ.

ಮೂಲ ಶಿಕ್ಷಣ ಅಧಿಕಾರಿ ಆಶಾ ಚೌಧರಿ ಅವರು ಈ ಘಟನೆಯ ಬಗ್ಗೆ ತಕ್ಷಣ ಸ್ಪಂದಿಸಿದ್ದು, ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಮತ್ತು ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ. ತನಿಖೆಯ ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.

ಈ ಘಟನೆಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಚರ್ಚೆಗಳು ನಡೆಯುತ್ತಿವೆ. ಕೆಲವರು ಶಿಕ್ಷಕಿಯ ಪರವಾಗಿ ಸಹಾನುಭೂತಿ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವರು ಸರ್ಕಾರಿ ಶಾಲೆಗಳ ಶಿಕ್ಷಣ ವ್ಯವಸ್ಥೆಯ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಒಬ್ಬ ಬಳಕೆದಾರರು, “ಅವರು ಕೂಡಾ ಮನುಷ್ಯರು. ರಾತ್ರಿ ತಡವಾಗಿ ಮಲಗಿ ಬೆಳಿಗ್ಗೆ ಬೇಗ ಎದ್ದಿರಬೇಕಾಗಬಹುದು. ಹೀಗಾಗಿ ನಿದ್ರೆ ಬರುವುದು ಸಹಜ” ಎಂದು ಹೇಳಿದ್ದಾರೆ. ಮತ್ತೊಬ್ಬರು, “ಉತ್ತರ ಪ್ರದೇಶದ ಸರ್ಕಾರಿ ಶಾಲೆಗಳ ಶಿಕ್ಷಣ ವ್ಯವಸ್ಥೆ ದೇವರ ಚಿತ್ತ” ಎಂದು ವ್ಯಂಗ್ಯವಾಡಿದ್ದಾರೆ.

ಇನ್ನು ಕೆಲವರು ಶಿಕ್ಷಕಿಯ ಅನಾರೋಗ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ವಿಡಿಯೊ ವೈರಲ್ ಮಾಡಿದವರ ಉದ್ದೇಶವನ್ನು ಪ್ರಶ್ನಿಸಿದ್ದಾರೆ. “ಅವರು ಅನಾರೋಗ್ಯದಿಂದ ಬಳಲುತ್ತಿರಬಹುದು! ಆದರೆ ವಿಡಿಯೊ ಮಾಡಿದವರಿಗೆ ಇದರ ಬಗ್ಗೆ ಕಾಳಜಿ ಇರುವುದಿಲ್ಲ” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಆದರೆ, ಮತ್ತೊಂದೆಡೆ, “ತಿಂಗಳಿಗೆ 50-60 ಸಾವಿರ ಸಂಬಳ ಪಡೆಯುತ್ತಾ ಶಾಲೆಯಲ್ಲಿ ಮಲಗುವುದು ಸರಿಯಲ್ಲ” ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ, ಅಲಿಗಢದ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕಿಯೊಬ್ಬರು ನೆಲದ ಮೇಲೆ ಮಲಗಿದ್ದ ಮತ್ತು ವಿದ್ಯಾರ್ಥಿಗಳು ಅವರಿಗೆ ಗಾಳಿ ಹಾಕುತ್ತಿದ್ದ ವಿಡಿಯೊ ವೈರಲ್ ಆಗಿ ಸಾಕಷ್ಟು ವಿವಾದ ಸೃಷ್ಟಿಸಿತ್ತು. ಆಗ ಅಧಿಕಾರಿಗಳು, ಶಿಕ್ಷಕಿಗೆ ಆರೋಗ್ಯ ಸಮಸ್ಯೆ ಇದ್ದ ಕಾರಣ ವಿದ್ಯಾರ್ಥಿಗಳು ಸಹಾಯ ಮಾಡುತ್ತಿದ್ದರು ಎಂದು ಸ್ಪಷ್ಟನೆ ನೀಡಿದ್ದರು. ಸದ್ಯಕ್ಕೆ ಮೀರತ್‌ನ ಈ ಘಟನೆ ಶಿಕ್ಷಣ ವ್ಯವಸ್ಥೆಯ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read