ಮೀರತ್: ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಬರ್ಬರವಾಗಿ ಕೊಲೆಗೈದ ಆರೋಪದ ಮೇಲೆ ಜೈಲು ಸೇರಿರುವ ಮುಸ್ಕಾನ್ ರಸ್ತೋಗಿ ಇದೀಗ ಗರ್ಭಿಣಿ ಎಂದು ತಿಳಿದುಬಂದಿದೆ. ಜೈಲಿನಲ್ಲಿ ನಡೆಸಲಾದ ಪ್ರಾಥಮಿಕ ವೈದ್ಯಕೀಯ ಪರೀಕ್ಷೆಯಲ್ಲಿ ಈ ವಿಷಯ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜೈಲಿನ ಹಿರಿಯ ಅಧೀಕ್ಷಕ ವಿರೇಶ್ ರಾಜ್ ಶರ್ಮಾ ಅವರು ಈ ಕುರಿತು ಮಾಹಿತಿ ನೀಡಿದ್ದು, ಜೈಲಿಗೆ ಹೊಸದಾಗಿ ಬರುವ ಮಹಿಳಾ ಕೈದಿಗಳಿಗೆ ನಿಯಮಿತವಾಗಿ ಆರೋಗ್ಯ ತಪಾಸಣೆ ಮತ್ತು ಗರ್ಭಧಾರಣೆ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಮುಸ್ಕಾನ್ ಅವರ ಪರೀಕ್ಷೆಯೂ ಇದರ ಭಾಗವಾಗಿತ್ತು. ವೈದ್ಯಕೀಯ ವರದಿ ಇನ್ನೂ ಬಂದಿಲ್ಲವಾದರೂ, ಮುಸ್ಕಾನ್ ಗರ್ಭಿಣಿ ಎಂಬ ಮೌಖಿಕ ಮಾಹಿತಿಯನ್ನು ತಮಗೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ಮುಖ್ಯ ವೈದ್ಯಾಧಿಕಾರಿ ಡಾ. ಅಶೋಕ್ ಕಟಾರಿಯಾ ಅವರು ಮಾತನಾಡಿ, ಮುಸ್ಕಾನ್‌ಗೆ ಪ್ರಾಥಮಿಕ ಪರೀಕ್ಷೆ ನಡೆಸಲಾಗಿದ್ದು, ಆಕೆಯ ಗರ್ಭಧಾರಣೆಯನ್ನು ಖಚಿತಪಡಿಸಲಾಗಿದೆ. ಮುಂದಿನ ಹಂತವಾಗಿ ಅಲ್ಟ್ರಾಸೌಂಡ್ ಪರೀಕ್ಷೆಯನ್ನು ಮಾಡಲಾಗುವುದು. ಇದರಿಂದ ಗರ್ಭಾವಸ್ಥೆಯ ನಿಖರವಾದ ಸ್ಥಿತಿ ಮತ್ತು ಅವಧಿ ತಿಳಿಯಲಿದೆ ಎಂದು ಅವರು ವಿವರಿಸಿದ್ದಾರೆ.
ಮಾಜಿ ನೌಕಾಪಡೆ ಅಧಿಕಾರಿಯಾಗಿದ್ದ ಸೌರಭ್ ರಜಪೂತ್ ಅವರನ್ನು ಮಾರ್ಚ್ 4 ರಂದು ಮೀರತ್‌ನ ಇಂದಿರಾನಗರದಲ್ಲಿರುವ ಅವರ ಮನೆಯಲ್ಲಿ ಕೊಲೆ ಮಾಡಲಾಗಿತ್ತು. ಈ ಕೊಲೆಗೆ ಅವರ ಪತ್ನಿ ಮುಸ್ಕಾನ್ ಮತ್ತು ಆಕೆಯ ಪ್ರಿಯಕರ ಸಾಹಿಲ್ ಸಂಚು ರೂಪಿಸಿ, ಸೌರಭ್‌ಗೆ ಮಾದಕ ವಸ್ತು ನೀಡಿ ಚಾಕುವಿನಿಂದ ಇರಿದು ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಅಷ್ಟೇ ಅಲ್ಲದೆ, ಆರೋಪಿಗಳು ಸೌರಭ್ ಅವರ ದೇಹವನ್ನು ತುಂಡು ಮಾಡಿ, ತಲೆ ಮತ್ತು ಕೈಗಳನ್ನು ಕತ್ತರಿಸಿ ಸಿಮೆಂಟ್ ತುಂಬಿದ ನೀಲಿ ಬಣ್ಣದ ಡ್ರಮ್‌ನಲ್ಲಿ ಬಚ್ಚಿಟ್ಟಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಈ ಭಯಾನಕ ಕೊಲೆ ಪ್ರಕರಣದ ತನಿಖೆಯು ಮುಸ್ಕಾನ್ 2023 ರ ನವೆಂಬರ್‌ನಿಂದಲೇ ಕೊಲೆಗೆ ಯೋಜನೆ ರೂಪಿಸುತ್ತಿದ್ದಳು ಎಂಬುದನ್ನು ಬಹಿರಂಗಪಡಿಸಿದೆ. ಪ್ರಸ್ತುತ ಇಬ್ಬರೂ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದು, ಮುಸ್ಕಾನ್ ಜೈಲಿನಲ್ಲಿ ಹೊಲಿಗೆ ಕೆಲಸ ಮಾಡುತ್ತಿದ್ದಾಳೆ ಮತ್ತು ಸಾಹಿಲ್ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾನೆ. ಇಬ್ಬರನ್ನೂ ಮಾದಕ ವ್ಯಸನ ಮುಕ್ತಿ ಕೇಂದ್ರದ ಸಹಾಯದಿಂದ ಪುನರ್ವಸತಿ ಪ್ರಕ್ರಿಯೆಯಲ್ಲಿ ಸೇರಿಸಲಾಗಿದೆ.