ಬೆಂಗಳೂರು: ಭಾರತೀಯರು ವಿದೇಶದಲ್ಲಿ ಆದ ಮದುವೆಯನ್ನು ಸಾಕ್ಷ್ಯಗಳ ಆಧಾರದ ಮೇಲೆ ಭಾರತದಲ್ಲಿಯೂ ಮಾನ್ಯವೆಂದು ಪರಿಗಣಿಸಬಹುದು. ವಿದೇಶಿ ವಿವಾಹ ಕಾಯ್ದೆಯಡಿ ನೋಂದಣಿ ಮಾಡುವುದು ಕಡ್ಡಾಯವಲ್ಲ. ಮದುವೆಯಾಗಿದೆ ಎನ್ನುವುದಕ್ಕೆ ಪೂರಕವಾಗಿ ಫೋಟೋ, ವಾಸ ಸ್ಥಳ, ಜಂಟಿ ಬ್ಯಾಂಕ್ ಖಾತೆ, ಪತ್ರ ವ್ಯವಹಾರ ಪುರಾವೆಗಳನ್ನು ಪ್ರಸ್ತುತಪಡಿಸಿದಲ್ಲಿ ಭಾರತೀಯ ಕಾನೂನಿನಡಿ ವಿವಾಹವನ್ನು ಸಿಂಧುವಾಗಿ ಪರಿಗಣಿಸಬಹುದಾಗಿದೆ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಆಸ್ತಿ ಪರಭಾರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಷನ್ಸ್ ಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ನಾಲ್ಕು ಮೇಲ್ಮನವಿ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಡಿ. ರಾಮಚಂದ್ರ ಹುದ್ದಾರ್ ಅವರ ಏಕ ಸದಸ್ಯ ಪೀಠ ಈ ತೀರ್ಪು ಪ್ರಕಟಿಸಿದೆ.
1969ರ ವಿದೇಶಿ ವಿವಾಹ ಕಾಯ್ದೆಯ ನಿಬಂಧನೆಗಳನ್ನು ಉದ್ದೇಶಪೂರ್ವಕ ರೀತಿಯಲ್ಲಿ ಅರ್ಥೈಸಿಕೊಳ್ಳಬೇಕು. ಕಾಯ್ದೆಯಡಿ ಮದುವೆ ನೋಂದಣಿ ಮಾಡಿಸಿಲ್ಲ ಎನ್ನುವ ಕಾರಣಕ್ಕೆ ನಿಜವಾದ ಸಂಬಂಧಗಳನ್ನು ಕಾನೂನು ರಕ್ಷಣೆಯಿಂದ ಹೊರಗಿಡಬಾರದು ಎಂದು ಹೇಳಲಾಗಿದೆ.
ರಾಮನಗರ ಮೂಲದ ಮಹಿಳೆ ಬೆಂಗಳೂರಿನ ವ್ಯಕ್ತಿಯನ್ನು ಮದುವೆಯಾಗಿದ್ದು, ದಂಪತಿ ವಿದೇಶದಲ್ಲಿ ನೆಲೆಸಿದ್ದರು. ಬೆಂಗಳೂರಿನಲ್ಲಿದ್ದ ಅತ್ತೆ, ಮಾವನ ಖಾತೆಗೆ ಹಣ ಕಳುಹಿಸುತ್ತಿದ್ದರು. ಇದೇ ಹಣವನ್ನು ಬಳಸಿಕೊಂಡು ಅವರು ಆಸ್ತಿ ಖರೀದಿಸಿದ್ದರು. ಆದರೆ ಪತಿ ನಿಧನರಾದ ನಂತರ ಅತ್ತೆ, ಮಾವ ಆಸ್ತಿ ಕಬಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಸೊಸೆ ಕೋರ್ಟ್ ಮೆಟ್ಟಿಲೇರಿದ್ದರು.
ಮಗ ಮತ್ತು ಪ್ರತಿವಾದಿ ಮಹಿಳೆಯ ನಡುವೆ ವೈವಾಹಿಕ ಸಂಬಂಧವಿಲ್ಲ. ಅವರ ನಡುವೆ ನಡೆದ ಮದುವೆ ವಿವಾಹ ಕಾಯ್ದೆಯಡಿಯಲ್ಲಿ ನೋಂದಣಿಯಾಗಿಲ್ಲ. ನಾವು ಸಂಪಾದಿಸಿದ ಹಣದಲ್ಲಿ ಆಸ್ತಿ ಖರೀದಿಸಿದ್ದೇವೆ ಎಂದು ಅತ್ತೆ, ಮಾವ ಹೇಳಿದ್ದಾರೆ.
ನಾವು ಕಳುಹಿಸಿದ ಹಣದಲ್ಲಿ ಆಸ್ತಿ ಖರೀದಿಸಿದ್ದಾರೆ. ಪತಿ ನಿಧನದ ನಂತರ ಆಸ್ತಿ ವಿಚಾರಕ್ಕೆ ವಿವಾದ ಉಂಟಾಗಿದೆ. ಹಣ ಕಳುಹಿಸಿದ, ಆಸ್ತಿ ಖರೀದಿಸಿದ ಬಗ್ಗೆ ದಾಖಲಾತಿ ಇವೆ ಎಂದು ಸೊಸೆ ಹೇಳಿದ್ದಾರೆ. ದಾಖಲೆ ಪರಿಶೀಲಿಸಿದ ವಿಚಾರಣೆ ನ್ಯಾಯಾಲಯ ತೀರ್ಪು ನೀಡಿದೆ.
ಭಾರತದ ಪ್ರಜೆ ವಿದೇಶದಲ್ಲಿ ಮದುವೆಯಾಗಬೇಕಾದರೆ ಭಾರತ ಸರ್ಕಾರ ಆ ದೇಶಕ್ಕೆ ನೇಮಿಸಿದ ಮ್ಯಾರೇಜ್ ಆಫೀಸರ್ ಸಂರಕ್ಷಮದಲ್ಲಿ ಮದುವೆಯಾಗಬೇಕು. ಅದನ್ನು ಕಾಯ್ದೆಯಡಿ ನೋಂದಣಿ ಮಾಡಿಸಿ ಪ್ರಮಾಣ ಪತ್ರ ನೀಡಿದ ಬಳಿಕ ಭಾರತೀಯ ಕಾನೂನುಗಳಡಿಯೂ ಮಾನ್ಯತೆ ಹೊಂದುತ್ತದೆ.