ರಾಯಚೂರು: ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟವರಿಗೆ ಮಂತ್ರಾಲಯ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.
ಉಗ್ರರ ದಾಳಿಯಲ್ಲಿ ಮೃತಪಟ್ಟವರ ಕುಟುಂಬದವರಿಗೆ ತಲಾ ಒಂದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಪಹಲ್ಗಾಮ್ ನಲ್ಲಿ ಪ್ರವಾಸಿಗರ ಹತ್ಯೆಯನ್ನು ತೀವ್ರವಾಗಿ ಖಂಡಿಸುತ್ತೇವೆ. ಭಾರತೀಯರು ಶಾಂತಿ ಪ್ರಿಯರು, ದೇಶದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಸೇರಿ ಎಲ್ಲಾ ಸಮುದಾಯದವರು ಒಂದೇ ತಾಯಿ ಮಕ್ಕಳಾಗಿದ್ದಾರೆ. ನಮ್ಮಲ್ಲಿ ಭೇದ ಭಾವನೆ ಇಲ್ಲ. ಆದರೆ, ಬೇರೆ ದೇಶದವರು, ಉಗ್ರರು ಬಂದು ಒಡೆದಾಳುವ ನೀತಿ ಮಾಡಿ ಜಾತಿ, ಕೋಮು ಗಲಭೆ ಸೃಷ್ಟಿಸುವ ಮೂಲಕ ಅಶಾಂತಿ ಉಂಟು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ನಾವೆಲ್ಲರೂ ಸಂಘಟಿತರಾಗಿ ಉಗ್ರರನ್ನು ಎದುರಿಸಬೇಕು. ಕಾಶ್ಮೀರದಲ್ಲಿ ನಡೆದ ಘಟನೆ ಎಲ್ಲಿಯಾದರೂ ನಡೆಯಬಹುದು. ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ದುಷ್ಕೃತ್ಯಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಭದ್ರತೆ, ಜಾಗ್ರತಿ ವಹಿಸಬೇಕು ಎಂದು ಹೇಳಿದ್ದಾರೆ.