ಮಂಡ್ಯ: ಚಿನ್ನ ವಂಚನೆ ಪ್ರಕರಣದ ಬೆನ್ನಲ್ಲೇ ಮಂಡ್ಯದಲ್ಲಿ ಮತ್ತೊಂದು ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಆದಾಯ ತೆರಿಗೆ, ರೈಸ್ ಪುಲ್ಲಿಂಗ್ ಹೆಸರಲ್ಲಿ 25 ಕೋಟಿ ಹಣ ವಂಚಿಸಿರುವ ಘಟನೆ ನಡೆದಿದೆ.
ಹಣ ಡಬ್ಲಿಂಗ್ ಆಮಿಷವೊಡ್ಡಿ 250 ಕ್ಕೂ ಹೆಚ್ಚು ಜನರಿಗೆ ವ್ಯಕ್ತಿಯೋರ್ವ ವಂಚಿಸಿದ್ದಾನೆ. ನಾಗರಾಜ್ ಎಂಬಾತ ಕೆರಗೋಡು ಬಸರಾಳು ಹೋಬಳಿಯ ಗ್ರಾಮಸ್ಥರಿಗೆ ವಂಚಿಸಿದ್ದಾನೆ. ಸದ್ಯ ಕೆರಗೋಡು ಪೊಲೀಸರು ವಂಚಕ ನಾಗರಾಜ್ ನನ್ನು ಬಂಧಿಸಿದ್ದಾರೆ.
ಆದಾಯ ತೆರಿಗೆ ಇಲಖೆಯಿಂದ 240 ಕೋಟಿ ಹಣ ಬರಬೇಕಿದೆ. ಟ್ಯಾಕ್ಸ್ ಪಾವತಿಸಿದರೆ ಆ ಹಣ ನನ್ನ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ ಎಂದು ನಕಲಿ ಇನ್ ಕಮ ಟ್ಯಾಕ್ಸ್ ಪತ್ರ ತೋರಿಸಿ ನಾಗರಾಜ್ ಹಣ ವಸೂಲಿ ಮಾಡಿದ್ದ. ಜೊತೆಗೆ ಸಾವಿರಾರು ಕೋಟಿ ಮೌಲ್ಯದ ರೈಸ್ ಪುಲ್ಲಿಂಗ್ ಚೊಂಬು ತನ್ನ ಬಳಿ ಇದೆ ಎಂದು ಕಥೆ ಕಟ್ಟಿದ್ದ. ಆ ಚೊಂಬು ಮಾರಾಟವಾದರೆ ಕೋಟ್ಯಂತರ ರೂಪಾಯಿ ಹಣ ಬರುತ್ತದೆ ಎಂದು ನಂಬಿಸಿದ್ದ. ಹೀಗೆ ಹೇಳಿ ಒಬ್ಬೊಬ್ಬರ ಬಳಿ 2 ಲಕ್ಷ, 5 ಲಕ್ಷ ಹಣ ಪಡೆದು ಒಟ್ಟು 25 ಕೋಟಿ ಹಣ ಸಂಗ್ರಹಿಸಿ ವಂಚಿಸಿದ್ದಾನೆ. ಹಣ ವಾಪಸ್ ಕೇಳಿದಾಗಲೆಲ್ಲ ನಕಲಿ ವಿಜ್ಞಾನಿಗಳನ್ನು ಕರೆಸಿ ನಕಲಿ ರೈಸ್ ಪುಲ್ಲಿಂಗ್ ಚೊಂಬು ಪ್ರದರ್ಶನ ಮಾಡಿ ಕಥೆ ಕಟ್ಟುತ್ತಿದ್ದ.
ನಾಗರಾಜ್ ವಂಚನೆ ಬಯಲಾಗುತ್ತಿದ್ದಂತೆ ಜನರಿಗೆ ಮೋಸ ಹೋಗಿದ್ದು ಅರಿವಾಗಿದೆ. ಇದರಿಂದ ನೊಂದ ಜನರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ.