ಕಾರ್ಮಿಕರ ನೋಂದಣಿಗೆ ವೇತನ ಚೀಟಿ, ಹಾಜರಾತಿ ಪಟ್ಟಿ ಕಡ್ಡಾಯ

ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಣಿ ಮಾಡಿಸಲು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರು ವೇತನ ಚೀಟಿ ಅಥವಾ ಹಾಜರಾತಿ ಪಟ್ಟಿ ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈ ಕುರಿತು ಸುತ್ತೋಲೆ ಹೊರಡಿಸಿದ್ದು, ಇದಕ್ಕೆ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದೆ.

ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ವಿವಿಧ ಸೌಲಭ್ಯ ನೀಡುವ ಸಂದರ್ಭದಲ್ಲಿ ಕಾರ್ಮಿಕರ ನೀಡಿದ ದಾಖಲೆ ಪರಿಶೀಲಿಸಿದಾಗ ಮತ್ತು ಸ್ಥಳ ಪರಿಶೀಲನೆ ಮಾಡಿದಾಗ ಅರ್ಹತಾ ಮಾನದಂಡ ಇಲ್ಲದವರೂ ಫಲಾನುಭವಿಗಳಾಗಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಅರ್ಹರಿಗೆ ಮಾತ್ರ ಮಂಡಳಿಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ವೇತನ ಚೀಟಿ ಅಥವಾ ಹಾಜರಾತಿ ಪಟ್ಟಿ ಸಲ್ಲಿಸುವುದನ್ನು ಕಡ್ಡಾಯ ಮಾಡಲಾಗಿದೆ.

ಅರ್ಹ ಕಾರ್ಮಿಕರಿಗೆ ಅನ್ಯಾಯವಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಕಾರ್ಮಿಕರ ಮಂಡಳಿಯಲ್ಲಿ 44.28 ಲಕ್ಷ ಕಾರ್ಮಿಕರ ನೋಂದಣಿಯಾಗಿದ್ದು, 6500 ಕೋಟಿ ರೂಪಾಯಿ ನಿಧಿ ಇದೆ. ನಿಜವಾದ ಕಾರ್ಮಿಕರಿಗೆ ಅನ್ಯಾಯವಾಗದಂತೆ ಅರ್ಹರಿಗೆ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದ್ದು, ಕಾರ್ಮಿಕರ ಸದಸ್ಯತ್ವ ನವೀಕರಣ ಸಂದರ್ಭದಲ್ಲಿ ಈ ಮಾಹಿತಿ ಪಡೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ.

ಕಾರ್ಮಿಕರು ನವೀಕರಣಕ್ಕೆ ಅರ್ಜಿ ಸಲ್ಲಿಸುವಾಗ 12 ತಿಂಗಳ ಅವಧಿಯಲ್ಲಿ 90 ದಿನ ಕೆಲಸ ಮಾಡಿದ ಬಗ್ಗೆ ಕಟ್ಟಡ ಮಾಲೀಕರು ಅಥವಾ ಗುತ್ತಿಗೆದಾರರಿಂದ ವೇತನ ಚೀಟಿ ಅಥವಾ ಹಾಜರಾತಿ ದಾಖಲೆ, ಉದ್ಯೋಗ ಪ್ರಮಾಣ ಪತ್ರದೊಂದಿಗೆ ಕಡ್ಡಾಯವಾಗಿ ಪಡೆಯಬೇಕು. ಸೇವಾ ಸಿಂಧು ತಂತ್ರಾಂಶ ಮೂಲಕ ನವೀಕರಣ ಅರ್ಜಿ ಸಲ್ಲಿಸುತ್ತಿದ್ದು, ಈ ಪ್ರಮಾಣ ಪತ್ರಗಳನ್ನು ಸಲ್ಲಿಸಿರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕೆಂದು ಹೇಳಲಾಗಿದೆ.

ಕಟ್ಟಡ ಕಾರ್ಮಿಕರು ಸಣ್ಣ ಸಣ್ಣ ಮೇಸ್ತ್ರಿಗಳ ಅಡಿಯಲ್ಲಿ ಕೆಲಸ ಮಾಡುತ್ತಿದ್ದು, ಮೇಸ್ತ್ರಿಗಳು ಕೂಡ ಕಾರ್ಮಿಕರೇ ಆಗಿರುವುದರಿಂದ ವೇತನ ಚೀಟಿ, ಹಾಜರಾತಿ ಪಟ್ಟಿ ಪಡೆಯಲು ಸಾಧ್ಯವಾಗುವುದಿಲ್ಲ. ಇಂತಹ ಸುತ್ತೋಲೆಯಿಂದ ಕಾರ್ಮಿಕರಿಗೆ ಸಮಸ್ಯೆ ಆಗುತ್ತದೆ. ಇದನ್ನು ವಾಪಸ್ ಪಡೆಯಬೇಕೆಂಬ ಒತ್ತಾಯ ಕೇಳಿ ಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read