ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿಯ ಸ್ಥಿತಿ ಕಂಡು ನೋಡಲಾಗದೇ ಆಕೆಯನ್ನು ಹತ್ಯೆಗೈದ ನಿವೃತ್ತ ಪ್ರಾಂಶುಪಾಲ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದ ನಾಸಿಕ್ ನಲ್ಲಿ ನಡೆದಿದೆ.
ಇಲ್ಲಿನ ಜೈಲ್ ರಸ್ತೆಯಲ್ಲಿನ ಮನೆಯಲ್ಲಿ ವ್ಯಕ್ತಿ ತನ್ನ ಪತ್ನಿಯ ಕತ್ತು ಹಿಸುಕಿ ಸಾಯಿಸಿದ್ದಾನೆ. ಬಳಿಕ ತಾನೂ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ. ಮುರಳೀಧರ್ ಜೋಶಿ (78) ಹಾಗೂ ಲತಾ ಜೋಶಿ ಮೃತರು. ಇಬ್ಬರೂ ನಿವೃತ್ತ ಶಿಕ್ಷಕರು. ವೃದ್ಧ ದಂಪತಿಯ ಇಬ್ಬರು ಮಕ್ಕಳು ಮುಂಬೈನಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಆದಾಗ್ಯೂ ಮುರಳೀಧರ್ ಜೋಶಿ, ಪತ್ನಿ ಅನಾರೋಗ್ಯದಿಂದ ನರಳುತ್ತಿರುವುದನ್ನು ನೋಡಲಾಗದೇ ಇಂತಹ ಕಠಿಣ ನಿರ್ಧರ ಕೈಗೊಂಡಿದ್ದಾರೆ.
ಪತ್ನಿ ಲತಾ ಜೋಶಿ 2017ರಿಂದ ಮೆದುಳಿನ ಅನಾರೋಗ್ಯದಿಂದ ಬಳಲುತ್ತಿದ್ದರು. ಇಬ್ಬರು ಮಕ್ಕಳು ಉನ್ನತ ಹುದ್ದೆಯಲ್ಲಿದ್ದರೂ ದಂಪತಿ ತಮ್ಮ ಬದುಕನ್ನೇ ಕೊನೆಗೊಳಿಸಿಕೊಳ್ಳುವ ನಿರ್ಧಾರ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಪತ್ನಿ ಹತ್ಯೆ ಬಳಿಕ ಪತ್ರವೊಂದನ್ನು ಬರೆದಿಟ್ತಿರುವ ಮುರಳೀಧರ ಜೋಶಿ, ನಾನು ಪತ್ನಿಯನ್ನು ಸ್ವರ್ಗಕ್ಕೆ ಕಳುಹಿಸಿದ್ದೇನೆ. ಈಗ ನಾನೂ ಆಕೆಯೊಂದಿಗೆ ಹೋಗುತ್ತಿದ್ದೇನೆ. ನಮ್ಮ ಸಾವಿಗೆ ಯಾರೂ ಕಾರಣರಲ್ಲ ಎಂದು ಬರೆದಿಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿರುವ ಪೊಲೀಸರು, ತನಿಖೆ ನಡೆಸಿದ್ದಾರೆ.