ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಕೊಲ್ಲಮಗ್ರು ಪನ್ನಿ ಸಮೀಪ ತೆಂಗಿನ ಮರ ಏರಿದ್ದ ವ್ಯಕ್ತಿ ಮರದ ಮೇಲೆಯೇ ಸಾವನ್ನಪ್ಪಿದ್ದಾರೆ.
ಕೇರಳದ ಪಾಲಕ್ಕಾಡ್ ನ ಅರುಚ್ಚಾಯ(41) ಮೃತಪಟ್ಟವರು. ಐದು ದಿನದ ಹಿಂದೆ ಕೇರಳದಿಂದ ತೆಂಗಿನ ಮರದಿಂದ ಶೇಂದಿ ಇಳಿಸಲು ಬಂದಿದ್ದ ಅವರು ಸೋಮವಾರ ಸಂಜೆ ಕೊಲ್ಲಮಗ್ರು ಪನ್ನಿ ಸಮೀಪ ವ್ಯಕ್ತಿಯೊಬ್ಬರ ಜಾಗದ ತೆಂಗಿನ ಮರದಿಂದ ಶೇಂದಿ ಇಳಿಸಲು ಮರ ಹತ್ತಿದ್ದಾರೆ,
ಮರದ ಮೇಲೆ ಅಸ್ವಸ್ಥಗೊಂಡು ಕೂಗಾಡಿದ ಅವರನ್ನು ಗಮನಿಸಿದ ಸ್ಥಳೀಯರು ರಕ್ಷಿಸಲು ಮರವೇರಿದಾಗ ಅಸ್ವಸ್ಥರಾಗಿದ್ದರೂ ಉಸಿರಾಡುತ್ತಿದ್ದರು. ಕೂಡಲೇ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಅರುಚ್ಚಾಯ ಅವರನ್ನು ಕೆಳಗಿಳಿಸುವ ವೇಳೆಗೆ ಕೊನೆಯುಸಿರೆಳೆದಿದ್ದಾರೆ.
ಬಳಿಕ ಮೃತದೇಹವನ್ನು ಕೆಳಗಿಳಿಸಿ ಸ್ಥಳೀಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಹೃದಯಾಘಾತದಿಂದ ಮೃತಪಟ್ಟಿರಬಹುದು ಶಂಕಿಸಲಾಗಿದೆ. ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
