ಬೆಂಗಳೂರು: ರಾಜ್ಯದಲ್ಲಿ ಮೆಕ್ಕೆಜೋಳದರ ಭಾರಿ ಕುಸಿತದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಸಚಿವರು ಮತ್ತು ಅಧಿಕಾರಿಗಳ ಸಭೆ ಕರೆದಿದ್ದಾರೆ.
ಮುಖ್ಯಮಂತ್ರಿಗಳ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ನಡೆಯಲಿರುವ ಸಭೆಯಲ್ಲಿ ಕೃಷಿ ಮಾರುಕಟ್ಟೆ ಸಚಿವರು, ಕೃಷಿ ಸಚಿವರು, ಪಶು ಸಂಗೋಪನಾ ಇಲಾಖೆ ಸಚಿವರು, ಅಧಿಕಾರಿಗಳು ಭಾಗವಹಿಸಲಿದ್ದಾರೆ. ಕಳೆದ ಜೂನ್ ಮತ್ತು ಜುಲೈನಲ್ಲಿ ಮೆಕ್ಕೆಜೋಳ ಕ್ವಿಂಟಲ್ ಗೆ 3000 ರೂ.ನಿಂದ 3100 ರೂ.ವರೆಗೆ ಮಾರಾಟವಾಗಿತ್ತು. ಈಗ 1700 ರೂಪಾಯಿಗೆ ದರ ಕುಸಿದಿದೆ. ಬೆಲೆ ಕುಸಿತದಿಂದ ರೈತರು ಖರ್ಚು ಮಾಡಿರುವ ಹಣವೂ ಸಿಗದಂತಾಗಿದೆ.
ಕೂಡಲೇ ಬೆಂಬಲ ಬೆಲೆ ಘೋಷಿಸಬೇಕು. ಖರೀದಿ ಕೇಂದ್ರ ಆರಂಭಿಸಬೇಕೆಂದು ರಾಜ್ಯದ ವಿವಿಧೆಡೆ ರೈತರು ಬಂದ್, ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಒಂದು ಕ್ವಿಂಟಲ್ ಮೆಕ್ಕೆಜೋಳಕ್ಕೆ 1890ರೂ. ದರ ನಿಗದಿಯಾಗಿದೆ. ರಾಜ್ಯದಲ್ಲಿ ಕ್ವಿಂಟಲ್ ಗೆ 1700 ರೂಪಾಯಿಗೆ ಕುಸಿತವಾಗಿದೆ. ಹೀಗಾಗಿ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ರೈತರು ಆಗ್ರಹಿಸಿದ್ದು, ಇಂದು ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು.
