ಮಹಾರಾಷ್ಟ್ರದ ಮುಂಬೈ, ಪುಣೆಯಾದ್ಯಂತ ಭಾರಿ ಮಳೆ ಅಬ್ಬರದಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಹೆದ್ದಾರಿ, ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದ್ದು, ಸಂಚಾರಕ್ಕೂ ಸಾಧ್ಯವಿಲ್ಲದೇ ವಾಹನಗಳು ನೀರಿನಲ್ಲಿ ತೇಲುತ್ತಿವೆ.
ವರುಣಾರ್ಭಟಕ್ಕೆ ಪುಣೆ-ಸೊಲ್ಲಾಪುರ ರಸ್ತೆಯಲ್ಲಿ ಪ್ರವಾಹದಂತೆ ನೀರು ರಭಸದಿಂದ ಹರಿಯುತ್ತಿದ್ದು, ಒಂದೆಡೆ ಅಂಗಡಿ ಮುಗ್ಗಟ್ಟುಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಮತ್ತೊಂದೆಡೆ ಸಾಲು ಸಾಲಾಗಿ ರಸ್ತೆಯಲ್ಲಿಯೇ ವಾಹನಗಳು ನಿಂತಿವೆ. ಪುಣೆ ಹೆದ್ದಾರಿಯಲ್ಲಿ ರಭಸದಿಂದ ಹರಿಯುತ್ತಿರುವ ನೀರಿನಲ್ಲಿ ಕಾರೊಂದು ಕೊಚ್ಚಿಕೊಂಡು ಹೋಗಿದೆ. ಕಾರಿನಲ್ಲಿದ್ದ ಚಾಲಕ ತಕ್ಷಣ ಹೊರಬಂದು ಈಜಿ ಜೀವ ಉಳಿಸಿಕೊಂಡಿದ್ದಾರೆ.
ಮತ್ತೊಂದೆಡೆ ಪುಣೆ-ಮಹಾರಾಷ್ಟ್ರ ಹೆದ್ದಾರಿಯಲ್ಲಿ ಭೀಮಾನದಿ ನೀರು ಉಕ್ಕಿ ಹರಿಯುತ್ತಿದ್ದು, ರಸ್ತೆಗಳೇ ಮಾಯವಾಗಿವೆ. ಉಜ್ಜಯಿ ಡ್ಯಾಂ ನಿಂದ ಅಪಾರ ಪ್ರಮಾಣದಲ್ಲಿ ನೀರು ಬಿಡುಗಡೆಯಾಗಿದ್ದು, ಈ ಭಾಗದ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿವೆ. ವಾಹನಗಳು ತರಗಲೆಗಳಂತೆ ತೇಲಾಡುತ್ತಿವೆ.
ಮುಂಗಾರು ಮಳೆಯ ಆರ್ಭಟ ಆರಂಭದ ದಿನದಲ್ಲೇ ಹಲವು ರಾಜ್ಯಗಳಲ್ಲಿ ಅನಾಹುತಗಳನ್ನು ಸೃಷ್ಟಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇದೇ ರೀತಿ ಮಳೆ ಮುಂದುವರೆದರೆ ಜನರ ಬದುಕು ಅಲ್ಲೋಲಕಲ್ಲೋಲವಾಗುವ ಭೀತಿ ಎದುರಾಗಿದೆ.