ಮುಂಬೈ: ಮಹಾರಾಷ್ಟ್ರದಾದ್ಯಂತ ಭಾರಿ ಮಳೆಯಾಗುತ್ತಿದ್ದು, ಮುಂಬೈನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಭೂಕುಸಿತ ಸಂಭವಿಸಿದೆ. ಇಬ್ಬರು ಮೃತಪಟ್ಟಿದ್ದಾರೆ.
ಮುಂಬೈನ ಪಾರ್ಕ್ ಸೈಟ್ ಪ್ರದೇಶದ ವಿಕ್ರೋಲಿಯಲ್ಲಿ ಭೂಕುಸಿತ ಸಂಭವಿಸಿದ್ದು, ಮನೆ ನೆಲಸಮಗೊಂಡು ಇಬ್ಬರು ಮೃತಪಟ್ಟಿದ್ದಾರೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸುರೇಶ್ ಮಿಶ್ರಾ (50) ಹಾಗೂ ಅವರ ಮಗಳು ಶಾಲು ಮಿಶ್ರಾ (19) ಮೃತ ದುರ್ದೈವಿಗಳು. ಅವರ ಪತ್ನಿ ಆರತಿ ಮಿಶ್ರಾ (45) ಹಾಗೂ ಮಗ ರುತುರಾಜ್ (20) ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಾರ್ಕ್ ಸೈಟ್ ಏರಿಯಾ ಜನನಿಬಿಡ ವಾಸಸ್ಥಳವಾಗಿದ್ದು, ಪ್ರತಿ ಮಳೆಗಾಲದಲ್ಲಿಯೂ ಭೂಕುಸಿತದಂತಹ ಘಟನೆ ಸಂಭವಿಸುತ್ತವೆ. ಸದ್ಯ ಘಟನಾ ಸ್ಥಳಕ್ಕೆ ರಕ್ಷಣಾ ತಂಡ ಧಾವಿಸಿದ್ದು, ಕಾರ್ಯಾಚರಣೆ ನಡೆಸುತ್ತಿದೆ.