ಗದಗ: ಮಹದಾಯಿ ಯೋಜನೆ ವಿಚಾರವಾಗಿ ಗೋವಾ ಸಿಎಂ ನೀಡಿರುವ ಹೇಳಿಕೆ ಖಂಡನೀಯ ಎಂದು ಬಿಜೆಪಿ ಸಂಸದ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಬೊಮ್ಮಾಯಿ, ನೀರಾವರಿ ವಿಚಾರದಲ್ಲಿ ರಾಜಕಾರಣ ಮಾಡುವ ಅವಶ್ಯಕತೆ ಇಲ್ಲ. ನಾವೆಲ್ಲಾ ಒಂದಾಗಿದ್ದೇವೆ. ನಾನು ಗೋವಾ ಮುಖ್ಯಮಂತ್ರಿ ಹೇಳಿಕೆಯನ್ನು ಖಂಡಿಸುತ್ತೇನೆ. ಒಂದು ರಾಜ್ಯದ ಹಿತಾಸಕ್ತಿಗೆ ಇಷ್ಟು ದೊಡ್ಡ ರಾಜಕೀಯ ಆಟ ಆಡುವ ಅವಶ್ಯಕತೆ ಇಲ್ಲ. ಅವರು ನ್ಯಾಯ ಸಮ್ಮತವಾಗಿ ನಡೆದುಕೊಳ್ಳಬೇಕು. ಆದ್ದರಿಂದ ಅವರ ಹೇಳಿಕೆಯನ್ನು ಖಂಡಿಸುತ್ತೇನೆ ಎಂದರು.
ಇದೇ ವೇಳೆ ಮಹದಾಯಿ ವಿಚಾರದಲ್ಲಿ ಏನಾದರೂ ಪ್ರಗತಿ ಮಾಡಿದ್ದರೆ ಅದು ಬಿಜೆಪಿ ಸರ್ಕಾರ, ಕಾಂಗ್ರೆಸ್ ನವರು ನ್ಯಾಯಮಂಡಳಿ ಮಾಡಿ ಅದಕ್ಕೆ ನಾಲ್ಕು ವರ್ಷ ಕಚೇರಿ ಕೊಡಲಿಲ್ಲ. ನಮ್ಮ ಸರ್ಕಾರ ಬಂದು ಕಚೇರಿ ನೀಡಿತು. ನ್ಯಾಯ ಮಂಡಳಿ ಆದೇಶ ಬಂತು ಆದರೆ, ಅದನ್ನು ಆದೇಶ ಮಾಡಲಿಲ್ಲ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಆದೇಶ ಹೊರಡಿಸಿತು. ಮಹದಾಯಿ ಯೋಜನೆಗೆ ಡಿಪಿಆರ್ ಮಾಡಿ ಒಪ್ಪಿಗೆ ಪಡೆದಿದ್ದು ಕೇಂದ್ರದ ಎನ್ ಡಿಎ ಸರ್ಕಾರ, ಪರಿಸರ ಅನುಮತಿಯನ್ನೂ ಬಿಜೆಪಿ ಸರ್ಕಾರವೇ ಕೊಡೆಸಿದೆ. ಕಾಂಗ್ರೆಸ್ ಒಂದೇ ಒಂದು ಕೆಲಸ ಮಾಡಿದ್ದು, ಬಿಜೆಪಿ ಅವಧಿಯಲ್ಲಿ ಕಾಮಗಾರಿ ಮಾಡಿ ಇಂಟರ್ ಲಿಂಕಿಂಗ್ ಕೆನಾಲ್ ಮಾಡಿದ್ದನ್ನು ತಡೆದು ಮಹದಾಯಿ ನೀರು ಮಲಪ್ರಭಾ ನದಿಗೆ ಹರಿಯದಂತೆ ಅಡ್ಡಗೋಡೆಯನ್ನು ಕಟ್ಟಿರುವುದು ಕಾಂಗ್ರೆಸ್ ಕೊಡುಗೆ ಎಂದು ಆರೋಪಿಸಿದರು.
ರಾಜ್ಯದ ಕಾಂಗ್ರೆಸ್ ನಾಯಕರಿಗೆ ಮಹದಾಯಿ ಬಗ್ಗೆ ಮಾತನಾಡುವ ಹಕ್ಕಿಲ್ಲ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮಹದಾಯಿಯಿಂದ ಕರ್ನಾಟಕಕ್ಕೆ ಒಂದು ಹನಿ ನೀರು ಕೊಡುವುದಿಲ್ಲ ಎಂದು ಹೇಳಿದ್ದರು. ಕಾಂಗ್ರೆಸ್ ನವರಿಗೆ ಯಾವ ನೈತಿಕ ಹಕ್ಕಿದೆ ಎಂದು ಪ್ರಶ್ನಿಸಿದರು.