ಗ್ವಾಲಿಯರ್: ಕೆಮ್ಮಿನ ಸಿರಪ್ ಸೇವಿಸಿದ್ದ 20ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿರುವ ಘಟನೆ ಬೆನ್ನಲ್ಲೇ ಕೆಮ್ಮಿನ ಸಿರಪ್ ನಲ್ಲಿ ಅಪಾಯಕಾರಿ ರಾಸಾಯನಿಕ ಅಂಶವಿರುವುದು ದೃಢಪಟ್ಟಿತ್ತು. ಇದೀಗ ಸರ್ಕಾರಿ ಆಸ್ಪತ್ರೆಯಲ್ಲಿ ನೀಡಲಾಗಿದ್ದ ಔಷಧದಲ್ಲಿ ಹುಳುಗಳು ಪತ್ತೆಯಾಗಿರುವ ಘಟನೆ ನಡೆದಿದೆ.
ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಮೊರಾರ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಅನಾರೋಯದಿಂದ ಬಳಲುತ್ತಿದ್ದ ಮಗುವಿಗೆ ನೀಡಲಾಗಿದ್ದ ಸಿರಪ್ ನಲ್ಲಿ ಹುಳುಗಳು ಪತ್ತೆಯಾಗಿವೆ. ಮಗುವಿಗೆ ಕೊಡಲಾಗಿದ್ದ ಅಝಿತ್ರೋಮೈಸಿಸ್ ಆಂಟಿಬಯಾಟಿಕ್ ಔಷಧ ಬಾಟಲಿಯಲ್ಲಿ ಹುಳುಗಳು ಪತ್ತೆಯಾಗಿವೆ ಎಂದು ಮಗುವಿನ ತಾಯಿ ಆರೋಪಿಸಿದ್ದಾರೆ.
ಹಿನ್ನೆಲೆಯಲ್ಲಿ ಮೊರಾರ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿರುವ ಇದೇ ಮಾದರಿಯ ಔಷಧಗಳನ್ನು ವಶಕ್ಕೆ ಪಡೆದು ಭೋಪಾಲ್ ನಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾಮಾನ್ಯವಾಗಿ ಯಾವುದೇ ಸೋಂಕಿನಿಂದ ಬಳಲುತ್ತಿರುವ ಮಕ್ಕಳಿಗೆ ಅಝಿತ್ರೋಮೈಸಿನ್ ಆಂಟಿಬಯಾಟಿಕ್ ನ್ನು ವೈದ್ಯರು ಶಿಫಾರಸು ಮಾಡುತ್ತಾರೆ. ಈ ಕೇಸ್ ನಲ್ಲಿ ಮಗುವಿಗೆ ನೀಡಿದ ಔಷಧಿ ಜೆನರಿಕ್ ಆಗಿದ್ದು, ಅದನ್ನು ಮದ್ಯಪ್ರದೇಶ ಮೂಲದ ಕಂಪನಿ ತಯಾರಿಸಿದೆ. ಔಷಧಿಯಲ್ಲಿ ಹುಳು ಪತ್ತೆಯಾಗಿದೆ ಎಂದು ಮಗುವಿನ ತಾಯಿ ಆರೋಪಿಸಿದ್ದಾರೆ. ನಮಗೆ ನೀಡಿದ ಔಷಧ ಬಾಟಲಿಯ ಮುಚ್ಚಳ ತೆರೆದುತ್ತು. ಹೀಗಾಗಿ ಅದನ್ನು ತಕ್ಷಣ ಪರೀಕ್ಷೆಗೆ ಕಳುಹಿಸಲಾಗಿದೆ. ಇದೇ ಆಸ್ಪತ್ರೆಗೆ ಪೂರೈಕೆಯಾಗಿದ್ದ 306 ಔಷಧ ಬಾಟಲ್ ಗಳನ್ನು ಹಿಂಪಡೆಯಲಾಗಿದೆ ಎಂದು ಔಷಧ ನಿಯಂತ್ರಕ ಅನುಭೂತಿ ಶರ್ಮಾ ತಿಳಿಸಿದ್ದಾರೆ.
ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಸೇವಿಸಿ ಮೂತ್ರಪಿಂಡ ವೈಫಲ್ಯದಿಂದಾಗಿ ಮಧ್ಯಪ್ರದೇಶದಲ್ಲಿ 24 ಮಕ್ಕಳು ಮೃತಪಟ್ಟಿದ್ದಾರೆ. ಈ ಘಟನೆ ಬೆನ್ನಲ್ಲೇ ಭಾರತದಲ್ಲಿ ತಯಾರಾಗುವ ಕೋಲ್ಡ್ರಿಫ್, ರೆಸ್ಪಿಫ್ರೆಶ್ ಟಿಆರ್, ರಿಲೈಫ್ ಸಿರಪ್ ಗಳ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.