ಪ್ರೀತಿ ನಿರಾಕರಿಸಿದ ಯುವತಿ ಮನೆ ಮುಂದೆಯೇ ಚಾಕುವಿನಿಂದ ಇರಿದುಕೊಂಡು ಯುವಕ ಆತ್ಮಹತ್ಯೆ

ಬೆಂಗಳೂರು: ಪ್ರೀತಿ ನಿರಾಕರಿಸಿದ ಯುವತಿ ಮನೆ ಎದುರೇ ಯುವಕ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ನಂದಿನಿ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಚೇತನ್(20) ಆತ್ಮಹತ್ಯೆ ಮಾಡಿಕೊಂಡವರು. ತುಂಗಾ ನಗರ ನಿವಾಸಿ ಆಟೋ ಚಾಲಕ ಚೇತನ್ ಮತ್ತು ನಂದಿನಿ ಲೇಔಟ್ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಇತ್ತೀಚೆಗೆ ಯುವತಿ ಚೇತನ್ ನಿಂದ ದೂರವಾಗಿದ್ದು, ಹಲವು ಬಾರಿ ಸಂಪರ್ಕಿಸಿದರೂ ಪ್ರೀತಿ ಮುಂದುವರಿಸಲು ಒಪ್ಪಿರಲಿಲ್ಲ. ಗುರುವಾರ ರಾತ್ರಿ ಚೇತನ್ ಯುವತಿಯ ಮನೆ ಮುಂದೆ ಹೋಗಿ ಗಲಾಟೆ ಮಾಡಿದ್ದಾನೆ.

ಪ್ರೀತಿ ಮುಂದುವರಿಸುವಂತೆ ಪಟ್ಟು ಹಿಡಿದಿದ್ದು, ಯುವತಿಯ ಪೋಷಕರು, ಚೇತನ್ ನಡುವೆ ಮಾತಿನ ಚಕಮಕಿ ನಡೆದಿದೆ. ತನ್ನೊಂದಿಗೆ ಬರದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವೆ ಎಂದು ಹೇಳಿದ ಚೇತನ್ ನೋಡನೋಡುತ್ತಿದ್ದಂತೆಯೇ ಹೊಟ್ಟೆಗೆ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇದನ್ನು ಗಮನಿಸಿದ ಯುವತಿಯ ಪೋಷಕರು ಚೇತನ್ ಪೋಷಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಧಾವಿಸಿ ಬಂದ ಪೋಷಕರು ಹಾಗೂ ಸ್ಥಳೀಯರು ಚೇತನ್ ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಯತ್ನಿಸಿದ್ದಾರೆ. ಚಾಕು ಇರಿತದಿಂದ ಅಷ್ಟೇನೂ ಗಾಯವಾಗಿಲ್ಲ ಎಂದು ಚೇತನ್ ಬಟ್ಟೆ ಸುತ್ತಿಕೊಂಡು ಮನೆಗೆ ಹೋಗಿ ಮಲಗಿದ್ದಾನೆ. ಶುಕ್ರವಾರ ಬೆಳಗ್ಗೆ ಹೊಟ್ಟೆಯಲ್ಲಿ ನೋವು ಶುರುವಾದಾಗ ಆಸ್ಪತ್ರೆಗೆ ಹೋಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಚಾಕು ಇರಿತದ ನಂತರ ಹೆಚ್ಚಿನ ರಕ್ತಸ್ರಾವ ಆಗದಿರುವುದರಿಂದ ಏನೂ ತೊಂದರೆಯಾಗಿಲ್ಲ ಎಂದು ಚೇತನ್ ಭಾವಿಸಿದ್ದ. ಆದರೆ ಹೊಟ್ಟೆಯೊಳಗೆ ನರ ತುಂಡಾಗಿ ಒಳಗೆ ರಕ್ತಸ್ರಾವವಾಗಿ ಹೆಪ್ಪುಗಟ್ಟಿ ನೋವು ಕಾಣಿಸಿಕೊಂಡಿರಬಹುದು. ಎಫ್ಎಸ್ಎಲ್ ವರದಿ ನಂತರ ಖಚಿತ ಕಾರಣ ತಿಳಿಯಲಿದೆ ಎಂದು ಪೊಲೀಸರು ಹೇಳಿದ್ದಾರೆ.

ಚೇತನ್ ಸಾವಿನ ಬಗ್ಗೆ ಆತನ ಪೋಷಕರು ಅನುಮಾನ ವ್ಯಕ್ತಪಡಿಸಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ದೂರು ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read