ಬಳ್ಳಾರಿ: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆ ಒಳಗೊಂಡಂತೆ 31 ನ್ಯಾಯಾಲಯಗಳಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ್ ಅದಾಲತ್ ಯಶಸ್ವಿಯಾಗಿ ಮುಕ್ತಾಯಗೊಂಡಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಕೆ.ಜಿ.ಶಾಂತಿ ಅವರು ತಿಳಿಸಿದ್ದಾರೆ.
ನ್ಯಾಯಾಲಯಗಳಲ್ಲಿ ದೀರ್ಘಕಾಲದಿಂದ ಬಾಕಿ ಇದ್ದ 16,650 ಪ್ರಕರಣಗಳನ್ನು ಅದಾಲತ್ ನಲ್ಲಿ ರಾಜಿ ಸಂಧಾನಕ್ಕೆ ಗುರುತಿಸಿ, ಇವುಗಳಲ್ಲಿ 11,512 ಪ್ರಕರಣಗಳನ್ನು ಯಶಸ್ವಿಯಾಗಿ ಇತ್ಯರ್ಥಪಡಿಸುವ ಮೂಲಕ 24,19,55,071.3 ರೂ. ವಸೂಲಾದ ಪರಿಹಾರ ಮೊತ್ತವಾಗಿದೆ ಎಂದು ತಿಳಿಸಿದ್ದಾರೆ.
ಅದೇರೀತಿಯಾಗಿ ಇತ್ಯರ್ಥಗೊಂಡ 4,60,909 ವ್ಯಾಜ್ಯಪೂರ್ವ ಪ್ರಕರಣಗಳಿಂದ 193,79,69,679 ರೂ. ಪರಿಹಾರ ಮೊತ್ತ ವಸೂಲಾಗಿದೆ. ರಾಷ್ಟ್ರೀಯ ಲೋಕ್ ಅದಾಲತ್ ಅಂಗವಾಗಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಒಟ್ಟು 27 ನ್ಯಾಯಪೀಠಗಳನ್ನು (ಬೆಂಚ್) ಸ್ಥಾಪಿಸಲಾಗಿತ್ತು ಎಂದಿದ್ದಾರೆ.
ಈ ಅದಾಲತ್‌ನಲ್ಲಿ ಸಾವಿರಾರು ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಇದರಲ್ಲಿ ಅನೇಕ ವ್ಯಾಜ್ಯಪೂರ್ವ ಪ್ರಕರಣಗಳು ಕೂಡ ಸೇರಿವೆ ಇದು ಅವುಗಳು ನ್ಯಾಯಾಲಯಕ್ಕೆ ಹೋಗುವುದನ್ನು ತಡೆಯುತ್ತದೆ. ದೊಡ್ಡ ಪ್ರಮಾಣದ ಬಾಕಿ ಮತ್ತು ವ್ಯಾಜ್ಯಪೂರ್ವ ಪ್ರಕರಣಗಳನ್ನು ರಾಜಿ ಮತ್ತು ಸಂಧಾನದ ಮೂಲಕ ಇತ್ಯರ್ಥಪಡಿಸುವುದು ಅದಾಲತ್‌ನ ಮುಖ್ಯ ಉದ್ದೇಶವಾಗಿದೆ ಎಂದು ಅವರು ಹೇಳಿದ್ದಾರೆ.
ಲೋಕ್ ಅದಾಲತ್ ಮೂಲಕ ಅಪಘಾತ ವಿಮೆ ಪ್ರಕರಣಗಳು, ಚೆಕ್ ಬೌನ್ಸ್, ಬ್ಯಾಂಕ್ ಸಾಲ ಮರುಪಾವತಿ ಪ್ರಕರಣಗಳು ಮತ್ತು ಗ್ರಾಹಕರ ದೂರುಗಳು ಸೇರಿದಂತೆ ವಿವಿಧ ರೀತಿಯ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ದೀರ್ಘಕಾಲದಿಂದ ಬಾಕಿ ಉಳಿದಿದ್ದ ಪ್ರಕರಣಗಳಿಗೂ ಪರಿಹಾರ ದೊರಕಿದೆ. ರಾಜಿ ಸಂಧಾನದ ಮೂಲಕ ಪ್ರಕರಣವನ್ನು ಇತ್ಯರ್ಥಪಡಿಸಿದವರಿಗೆ ಸಂಪೂರ್ಣ ನ್ಯಾಯಾಲಯ ಶುಲ್ಕವನ್ನು ಮರುಪಾವತಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿನ 10 ಕೌಟುಂಬಿಕ ಪ್ರಕರಣಗಳಲ್ಲಿನ ವಾದಗಳನ್ನು ಬಗೆಹರಿಸಿ ದೂರ ಉಳಿದಿದ್ದ ಪತಿ-ಪತ್ನಿಯನ್ನು ಒಂದುಗೂಡಿಸಿ ಸಾಮರಸ್ಯ ಜೀವನ ಮಾಡುವಂತೆ ಸಂಧಾನ ಮಾಡಲಾಗಿದೆ. ಹತ್ತು ವರ್ಷಗಳಿಂದ ಬಾಕಿ ಇದ್ದ 04 ಚೆಕ್ ಬೌನ್ಸ್ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಮುಕ್ತಾಯಗೊಳಿಸಲಾಗಿದೆ.
ಸುಮಾರು 215 ಚೆಕ್ ಬೌನ್ಸ್ ಪ್ರಕರಣಗಳನ್ನು ರಾಜಿ ಮೂಲಕ ಸಂಧಾನ ಮಾಡಿ ಸುಮಾರು ರೂ. 6,43,18,707 ಗಳನ್ನು ಪರಿಹಾರ ಕೊಡಲಾಗಿದೆ. 52 ಬ್ಯಾಂಕ್ ದಾವೆ ಮತ್ತು 24 ಹಣವಸೂಲಾತಿ ದಾವೆಗಳನ್ನು ರಾಜಿ ಸಂಧಾನದ ಮೂಲಕ ಮುಕ್ತಾಯಗೊಳಿಸಿ ರೂ.2,51,82,098 ಗಳನ್ನು ಪಾವತಿಸಲಾಗಿದೆ. ಅದೇ ರೀತಿಯಾಗಿ 66 ಅಪಘಾತ ಪರಿಹಾರದ ಪ್ರಕರಣ, 68 ಪಾಲು ಭಾಗ ದಾವೆಗಳನ್ನು, ಇತರೆ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ಲೋಕ್ ಅದಾಲತ್ ನಲ್ಲಿ ರಾಜಿ ಸಂಧಾನದ ಮುಖಾಂತರ ಮುಕ್ತಾಯಗೊಳಿಸಲಾಗಿದೆ.
ಲೋಕ್ ಅದಾಲತ್‌ಗಳು ನ್ಯಾಯಾಂಗದ ಮೇಲಿನ ಒತ್ತಡ ಕಡಿಮೆ ಮಾಡಲು ಮತ್ತು ಸಮಾಜದಲ್ಲಿ ಸೌಹಾರ್ದಯುತ ವಾತಾವರಣ ನಿರ್ಮಿಸಲು ಸಹಕಾರಿಯಾಗಿವೆ. ಅದಾಲತ್ ನಲ್ಲಿ ಎಲ್ಲಾ ನ್ಯಾಯಾಧೀಶರು, ವಕೀಲರು, ಪೊಲೀಸ್ ಅಧಿಕಾರಿಗಳು, ಬ್ಯಾಂಕ್ ಅಧಿಕಾರಿಗಳು, ಸರ್ಕಾರ ಅಧಿಕಾರಿಗಳು ಮತ್ತು ಕಂಪನಿಗಳು ಸೇರಿದಂತೆ ಎಲ್ಲ ಪಾಲುದಾರರ ಸಹಕಾರದಿಂದ ಯಶಸ್ವಿಗೆ ಕಾರಣವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಕೆ.ಜಿ.ಶಾಂತಿ ಅವರು ಅಭಿನಂದಿಸಿದ್ದಾರೆ.