ನವದೆಹಲಿ : 17,000 ಕೋಟಿ ರೂ. ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ರಿಲಯನ್ಸ್ ಗ್ರೂಪ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅನಿಲ್ ಅಂಬಾನಿ ಗೆ ಜಾರಿ ನಿರ್ದೇಶನಾಲಯ (ED) ಸಮನ್ಸ್ ಜಾರಿ ಮಾಡಿದೆ.
ಆಗಸ್ಟ್ 5 ರಂದು ನವದೆಹಲಿಯ ಇಡಿ ಪ್ರಧಾನ ಕಚೇರಿಯಲ್ಲಿ ಅಧಿಕಾರಿಗಳ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ . ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಸಂಸ್ಥೆಯು ಅಕ್ರಮ ಹಣ ವರ್ಗಾವಣೆ ತನಿಖೆ ನಡೆಸುತ್ತಿದೆ. ತನಿಖೆಯ ಭಾಗವಾಗಿ, ಕಳೆದ ವಾರ ಇಡಿ ಅಂಬಾನಿಯ ರಿಲಯನ್ಸ್ ಗ್ರೂಪ್ಗೆ ಸಂಬಂಧಿಸಿದ ಮುಂಬೈನ ಸುಮಾರು 35 ಸ್ಥಳಗಳನ್ನು ಶೋಧಿಸಿದೆ. ಈ ಶೋಧದಲ್ಲಿ ಸುಮಾರು 50 ಕಂಪನಿಗಳು ಮತ್ತು 25 ವ್ಯಕ್ತಿಗಳು ಸೇರಿದ್ದಾರೆ.
ಜಾರಿ ನಿರ್ದೇಶನಾಲಯ (ಇಡಿ) ಕಳೆದ ಗುರುವಾರ ಮುಂಬೈನಲ್ಲಿರುವ ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಅವರ ಕಂಪನಿಗಳಿಗೆ ಸಂಬಂಧಿಸಿದ ಹಲವಾರು ಸ್ಥಳಗಳಲ್ಲಿ ಶೋಧ ನಡೆಸಿತು.ದೆಹಲಿ ಮತ್ತು ಮುಂಬೈನ ಇಡಿ ತಂಡಗಳು ಅವರ ಗುಂಪಿನ ಕೆಲವು ಕಂಪನಿಗಳಿಗೆ ಸಂಬಂಧಿಸಿದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ತನಿಖೆಯು RAAGA (ರಿಲಯನ್ಸ್ ಅನಿಲ್ ಅಂಬಾನಿ ಗ್ರೂಪ್) ಕಂಪನಿಗಳಿಂದ ನಡೆದ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದೆ.
ರಾಷ್ಟ್ರೀಯ ವಸತಿ ಬ್ಯಾಂಕ್, ಭಾರತೀಯ ಭದ್ರತಾ ಮಂಡಳಿ (ಸೆಬಿ), ರಾಷ್ಟ್ರೀಯ ಹಣಕಾಸು ವರದಿ ಪ್ರಾಧಿಕಾರ (ಎನ್ಎಫ್ಆರ್ಎ), ಬ್ಯಾಂಕ್ ಆಫ್ ಬರೋಡಾ ಸೇರಿದಂತೆ ಹಲವು ನಿಯಂತ್ರಕ ಮತ್ತು ಹಣಕಾಸು ಸಂಸ್ಥೆಗಳಿಂದ ಪಡೆದ ಮಾಹಿತಿ ಮತ್ತು ಕೇಂದ್ರೀಯ ತನಿಖಾ ದಳ (ಸಿಬಿಐ) ಸಲ್ಲಿಸಿದ ಎರಡು ಎಫ್ಐಆರ್ಗಳನ್ನು ಆಧರಿಸಿ ಇಡಿ ಕ್ರಮ ಕೈಗೊಳ್ಳಲಾಗಿದೆ.