ಉಡುಪಿ : ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ಪ್ರಕರಣಕ್ಕೆ ಮಹಿಳಾ ಆಯೋಗ ಎಂಟ್ರಿಯಾಗಿದ್ದು , ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್ ಉಡುಪಿಗೆ ಆಗಮಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಖುಷ್ಬೂ ಸುಂದರ್ ಇದು ಬಹಳ ಸೂಕ್ಷ್ಮ ವಿಚಾರವಾಗಿದ್ದು, ಯಾರೂ ರಾಜಕೀಯ ಬಣ್ಣ ಬಳಿಯಬೇಡಿ ಎಂದಿದ್ದಾರೆ. ಈ ಬಗ್ಗೆ ಪೊಲೀಸರಿಂದ ಮಾಹಿತಿ ಪಡೆದಿದ್ದೇನೆ, ಈ ಬಗ್ಗೆ ಪೊಲೀಸರು ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುತ್ತಾರೆ ಎಂದರು. ರಾಜಕಾರಣಿಗಳು ರಾಜಕೀಯ ಪಕ್ಷಗಳು ಇದನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು ಎಂದರು. ಈವರೆಗೂ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ. ಈ ಪ್ರಕರಣಕ್ಕೆ ಕೋಮುಬಣ್ಣ ಬಳಿಯಬೇಡಿ ಎಂದು ರಾಷ್ಟ್ರೀಯ ಮಹಿಳಾ ಆಯೋಗ ಸದಸ್ಯೆ ಖುಷ್ಬೂ ಸುಂದರ್ ತಿಳಿಸಿದರು.
ಆರೋಪಿತ ಮೂವರು ವಿದ್ಯಾರ್ಥಿನಿಯರ ಮೊಬೈಲ್ನಲ್ಲಿ ಯಾವುದೇ ವಿಡಿಯೋ ಕಂಡು ಬಂದಿಲ್ಲ. ಸಂಬಂಧಪಟ್ಟ ಮೊಬೈಲ್ಗಳನ್ನು ಪೊಲೀಸರು ವಶಕ್ಕೆ ಪಡೆದು ಪರೀಕ್ಷೆ ಮಾಡಿದ್ದು, ಏನು ಪತ್ತೆಯಾಗಿಲ್ಲ. ಮೂರು ಮೊಬೈಲ್ಗಳ ಡೇಟಾ ಸಂಗ್ರಹ ಮಾಡಿದ್ದಾರೆ. ಯಾವುದೇ ಸಾಕ್ಷ್ಯ ದೊರೆಯದೆ ಆ ಮೂವರು ಯುವತಿಯರನ್ನು ಅಪರಾಧಿ ಎನ್ನಲು ಆಗುವುದಿಲ್ಲ, . ಅವರಿನ್ನು ಆರೋಪಿಗಳು ಅಷ್ಟೇ. ಸರಿಯಾದ ಸಾಕ್ಷಿ ಸಿಗದೇ ಹೋದರೆ ಚಾರ್ಜ್ ಶೀಟ್ ಮಾಡಲು ಸಾಧ್ಯವಿಲ್ಲ, ಈ ಘಟನೆಗೆ ಯಾರೂ ರಾಜಕೀಯ ಬಣ್ಣ ಬಳಿಯಬೇಡಿ ಎಂದಿದ್ದಾರೆ.
ಶೌಚಾಲಯದಲ್ಲಿ ಮೊಬೈಲ್ ಇಟ್ಟು ವಿಡಿಯೋ ಚಿತ್ರೀಕರಣ ಮಾಡಿದ್ದಲ್ಲದೇ, ಅದನ್ನು ವಾಟ್ಸಾಪ್ ಗ್ರೂಪ್ ನಲ್ಲಿ ಶೇರ್ ಮಾಡಿದ ಆರೋಪದ ಮೇಲೆ ಮೂವರು ವಿದ್ಯಾರ್ಥಿನಿಯರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಒಂದು ಕೋಮಿನ ವಿದ್ಯಾರ್ಥಿನಿಯರು ಶೌಚಾಲಯದಲ್ಲಿ ಮೊಬೈಲ್ ಕ್ಯಾಮೆರಾ ಇಟ್ಟು ಇನ್ನೊಂದು ಕೋಮಿನ ವಿದ್ಯಾರ್ಥಿನಿಯರು ಶೌಚಕ್ಕೆ ಹೋದಾಗ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾರೆ. ಅದನ್ನ ವಾಟ್ಸಪ್ ಗ್ರೂಪ್ ನಲ್ಲಿ ಶೇರ್ ಮಾಡಿದ್ದಾರೆ ಎನ್ನಲಾಗಿದ್ದು, ಇದು ಗೊತ್ತಾದ ಬಳಿಕ ಮತ್ತೊಂದು ಕೋಮಿನ ವಿದ್ಯಾರ್ಥಿನಿಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಮೂವರು ವಿದ್ಯಾರ್ಥಿನಿಯರ ವಿರುದ್ಧ ವಿವಿಧ ಐಪಿಸಿ ಸೆಕ್ಷನ್ ಗಳಡಿ ಪ್ರಕರಣ ದಾಖಲಾಗಿದೆ.