ತಾನು ಲಾಟರಿಯೊಂದರಲ್ಲಿ £70 ದಶಲಕ್ಷ (700 ಕೋಟಿ ರೂ. ಗಳು) ಗೆದ್ದಿರುವುದಾಗಿ ಎಲ್ಲೆ ಬೆಲ್ ಹೆಸರಿನ ಮಹಿಳೆಯೊಬ್ಬರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಭಾರೀ ನಗದನ್ನು ಗೆದ್ದ ಬೆನ್ನಿಗೇ ಅದನ್ನು ಕೈಗೆ ಪಡೆಯಲು ತಾನು ಏನೆಲ್ಲಾ ಕಷ್ಟ ಪಡಬೇಕೆಂದು ಮಹಿಳೆ ವಿಡಿಯೋದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ತಲೆಮಾರುಗಳು ಕುಳಿತು ಉಣ್ಣಬಹುದಾದಷ್ಟು ಹಣ ಗೆದ್ದಿದ್ದರೂ ಸಹ ಆ ದುಡ್ಡನ್ನು ಸಾಮಾನ್ಯ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗದ ಕಾರಣ ತಾನು ಈ ವಿಡಿಯೋ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ ಬೆಲ್.
“ನಾನು ಈ ಬಗ್ಗೆ ಯಾರಿಗೂ ಹೇಳಿಲ್ಲ, ಅಲ್ಲದೇ ನನ್ನಕುಟುಂಬಕ್ಕೂ ಈ ವಿಚಾರ ತಿಳಿಸಿಲ್ಲ. ಕಳೆದ ತಿಂಗಳು ಭಾರೀ ಬಹುಮಾನ ಗೆದ್ದ ಬೆನ್ನಿಗೆ ಈ ಕುರಿತು ಯೋಜನೆಯೊಂದನ್ನು ರೂಪಿಸುತ್ತಿದ್ದೇನೆ. ಜೀವನ ಬದಲಾಗಿದೆ; ನಾನು ಬಾಡಿಗೆಗೆ ನೋಡುವುದಕ್ಕಿಂತ ಸಾಲ ಕೊಡುವುದನ್ನು ಎದುರು ನೋಡುತ್ತಿದ್ದೇನೆ,” ಎಂದಿದ್ದಾರೆ ಬೆಲ್.
ತಾನು ಈಗಲೂ ಸಹ ಬಾಡಿಗೆ ಮನೆಯಲ್ಲಿದ್ದು, ಆಸ್ತಿ ಮೇಲೆ ಸಾಲ ನೀಡುವವರನ್ನು ಕಂಡುಕೊಳ್ಳಲು ಕಷ್ಟವಾಗುತ್ತಿದೆ ಎಂದು ತಿಳಿಸಿರುವ ಈಕೆಗೆ ತನ್ನ ಕೆಲಸದ ದಾಖಲೆಗಳಿಲ್ಲದ ಕಾರಣ ಹೀಗೆಲ್ಲಾ ಸಮಸ್ಯೆಗಳಾಗುತ್ತಿವೆ ಎಂದು ತಿಳಿಸಿದ್ದಾರೆ.
ಅಲ್ಲದೇ ತಾನು ಗೆದ್ದ ’ನ್ಯಾಷನಲ್ ಲಾಟರಿ’ಯು ಬಹುಮಾನದ ಮೊತ್ತವನ್ನು ಬೆಲ್‌ಳ ಸಾಮಾನ್ಯ ಬ್ಯಾಂಕ್ ಖಾತೆಯಲ್ಲಿ ಜಮಾ ಮಾಡಲು ಸಾಧ್ಯವಾಗದು ಎಂದಿದೆ. “ನನಗೆ ಆ ದುಡ್ಡಿನ ಒಂದು ಭಾಗವೂ ಸಿಕ್ಕಿಲ್ಲ. ಅದು ಬೇರೊಂದು ಬ್ಯಾಂಕ್ ಖಾತೆಗೆ ಸೇರಬೇಕು. ಬಾರ್ಕ್ಲೇಸ್ ಅಥವಾ ಮೊಂಜ಼ೋನಂಥ ದೊಡ್ಡ ಬ್ಯಾಂಕ್‌ಗಳು ನನ್ನ ಕೈಗೆಟುಕುವ ಹಾಗೆ ಕಾಣುತ್ತಿಲ್ಲ,” ಎನ್ನುತ್ತಾರೆ ಬೆಲ್.
ಈ ಹಿಂದೆ ತನ್ನನ್ನು ಕ್ಯಾರೇ ಎನ್ನದ ಸಹೋದರರಿಗೆ ಕೈಗೆ ಸಿಗದೇ ಇರಲೆಂದು ತನ್ನ ಮೊಬೈಲ್ ಸಂಖ್ಯೆಯನ್ನೇ ಬದಲಿಸಿಕೊಂಡಿರುವುದಾಗಿ ಬೆಲ್ ಹೇಳಿಕೊಂಡಿದ್ದಾರೆ.