ಬೆಂಗಳೂರು: ವೈಯಕ್ತಿಕ ಖರ್ಚು ವೆಚ್ಚದ ನೆಪ ಹೇಳಿ ಪತ್ನಿಗೆ ನೀಡುವ ಜೀವನಾಂಶ ಮೊತ್ತ ಕಡಿತಗೊಳಿಸಲಾಗದು ಎಂದು ಹೈಕೋರ್ಟ್ ಹೇಳಿದೆ. ಈ ನಿಟ್ಟಿನಲ್ಲಿ ಕೌಟುಂಬಿಕ ನ್ಯಾಯಾಲಯ ನೀಡಿದ ಆದೇಶವನ್ನು ಪ್ರಶ್ನಿಸಿದ್ದ ಅರ್ಜಿದಾರರಿಗೆ 15 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.
ಪತ್ನಿಯ ಜೀವನಾಂಶಕ್ಕೆ ಮಾಸಿಕ 15,000 ರೂ., ಮಕ್ಕಳ ಪೋಷಣೆಗೆ 10,000 ರೂ. ಪಾವತಿಸುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ ಆದೇಶವನ್ನು ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಹಂಚಾಟೆ ಸಂಜೀವಕುಮಾರ್ ಅವರಿದ್ದ ನ್ಯಾಯಪೀಠ ಪತಿಯ ಅನಗತ್ಯ ಖರ್ಚಿಗಾಗಿ ಜೀವನಾಂಶ ಮೊತ್ತ ಇಳಿಕೆ ಇಲ್ಲವೆಂದು ಆದೇಶ ನೀಡಿದೆ.
ಅರ್ಜಿದಾರರು ತಾವು ಪಡೆಯುತ್ತಿರುವ ವೇತನದ ರಶೀದಿಯನ್ನು ನ್ಯಾಯ ಪೀಠಕ್ಕೆ ಸಲ್ಲಿಸಿದ್ದಾರೆ. ಭವಿಷ್ಯ ನಿಧಿ, ಮನೆ ಬಾಡಿಗೆ, ಪೀಠೋಪಕರಣಗಳಿಗೆ ಭರಿಸುತ್ತಿರುವ ವೆಚ್ಚ ಪರಿಗಣಿಸಿ ಜೀವನಾಂಶ ಮೊತ್ತ ಕಡಿಮೆ ಮಾಡಬೇಕು ಎಂದು ಕೋರಿದ್ದಾರೆ. ವೇತನದಿಂದ ವೃತ್ತಿಪರ ತೆರಿಗೆ, ಆದಾಯ ತೆರಿಗೆ ಕಡಿತವಾಗುತ್ತಿದ್ದು, ಎಲ್ಐಸಿ, ಪೀಠೋಪಕರಣಗಳ ಖರೀದಿ ಮೊದಲಾದವು ವೈಯಕ್ತಿಕ ಪ್ರಯೋಜನಕ್ಕಾಗಿ ಕಡಿತವಾಗುತ್ತಿವೆ.
ಈ ನೆಪ ಹೇಳಿ ಪತ್ನಿಗೆ ಕೊಡುತ್ತಿರುವ ಜೀವನಾಂಶ ಕಡಿತಗೊಳಿಸಲು ಅವಕಾಶವಿಲ್ಲ. ಅರ್ಜಿ ಪುರಸ್ಕರಿಸಿದಲ್ಲಿ ಸಿಆರ್ಪಿಸಿ ಸೆಕ್ಷನ್ 125ರ ಅಡಿಯಲ್ಲಿ ಸಲ್ಲಿಸಲಾದ ಅರ್ಜಿಯ ಪ್ರತಿ ಪ್ರಕರಣದಲ್ಲೂ ಪತಿಯು ಕೃತಕವಾಗಿ ಕಡಿತಗಳನ್ನು ತೋರ್ಪಡಿಸುವ ಪ್ರವೃತ್ತಿ ಇರುತ್ತದೆ. ಇದು ಜೀವನಾಂಶ ನಿರಾಕರಿಸಲು ಕೋರ್ಟ್ ಗಳನ್ನು ದಾರಿ ತಪ್ಪಿಸುವ ಉದ್ದೇಶದಿಂದ ಇದ್ದು, ನಕಲಿ ವೇತನ ತೋರಿಸಲು ಯತ್ನಿಸುತ್ತಾರೆ ಎಂದು ಹೇಳಿದ ನ್ಯಾಯಪೀಠ, ಅನಗತ್ಯ ಖರ್ಚಿಗಾಗಿ ಪತ್ನಿಗೆ ಜೀವನಾಂಶ ಮೊತ್ತ ಕಡಿತವಿಲ್ಲ ಎಂದು ಹೇಳಿ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿದ್ದ ಅರ್ಜಿದಾರರಿಗೆ 15 ಸಾವಿರ ರೂಪಾಯಿ ದಂಡ ವಿಧಿಸಿದೆ.